ಮಂಗಳೂರು, ಆ. 31 (DaijiworldNews/AA): ಆಗಸ್ಟ್ 28ರ ಮಧ್ಯಾಹ್ನ ತಲಪಾಡಿಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ, ಮಂಜೇಶ್ವರ ಪೊಲೀಸರು ಕರ್ನಾಟಕ ಕೆಎಸ್ಆರ್ಟಿಸಿ ಬಸ್ ಚಾಲಕ ಬಾಗಲಕೋಟೆ ಅಂಬೇಡ್ಕರ್ ನಗರ ನಿವಾಸಿ ನಿಜಲಿಂಗಪ್ಪ ಚಲವಾದಿ (47) ಅವರನ್ನು ಬಂಧಿಸಿದ್ದಾರೆ.

ಬಸ್ ಚಾಲಕನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಬಂಧಿತನಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.
ತಲಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಎಸ್ಆರ್ಟಿಸಿ ಬಸ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ, ರಿಕ್ಷಾ ಚಾಲಕ ಸೇರಿ ಆರು ಮಂದಿ ಸಾವನ್ನಪ್ಪಿದ್ದರು. ಅಪಘಾತದ ಬಳಿಕ ಚಾಲಕ ಬಸ್ನಿಂದ ಇಳಿದು ಹೋದ ಪರಿಣಾಮ ಇಳಿಜಾರು ರಸ್ತೆಯಲ್ಲಿ ಬಸ್ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ಪ್ರಯಾಣಿಕರು ಮತ್ತು ಮತ್ತೊಂದು ರಿಕ್ಷಾಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು.
ಇದೇ ವೇಳೆ, ಅಪಘಾತದ ಕುರಿತು ಸ್ಪಷ್ಟನೆ ನೀಡಿರುವ ಕರ್ನಾಟಕ ಕೆಎಸ್ಆರ್ಟಿಸಿ ಅಧಿಕಾರಿಗಳು, ಬಸ್ನಲ್ಲಿ ಯಾವುದೇ ಬ್ರೇಕ್ ವೈಫಲ್ಯ ಅಥವಾ ತಾಂತ್ರಿಕ ದೋಷ ಇರಲಿಲ್ಲ. ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ.