ಬೈಂದೂರು, ಆ. 31 (DaijiworldNews/AA): ಆಗಸ್ಟ್ 27 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆವರಣದಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ಮಹಿಳೆಯೋರ್ವರು ಸೌಪರ್ಣಿಕಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.


ಬೆಂಗಳೂರಿನ ತ್ಯಾಗರಾಜನಗರದ ವಿಮಲಾ ಎಂಬುವವರು ನೀಡಿದ ದೂರಿನ ಪ್ರಕಾರ, ಅವರ ಮಗಳು ವಸುಧಾ ಚಕ್ರವರ್ತಿ(45) ಅವರು ತಮ್ಮ ಕಾರಿನಲ್ಲಿ ಕೊಲ್ಲೂರಿಗೆ ಪ್ರಯಾಣಿಸಿ ದೇವಸ್ಥಾನದ ಅತಿಥಿಗೃಹದ ಬಳಿ ನಿಲ್ಲಿಸಿದ್ದರು. ಮಗಳಿಗೆ ದೂರವಾಣಿ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ದೂರುದಾರರು ಆಗಸ್ಟ್ 29 ರಂದು ಕೊಲ್ಲೂರಿಗೆ ಭೇಟಿ ನೀಡಿ ದೇವಸ್ಥಾನದ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ವಸುಧಾ ಅವರು ದೇವಸ್ಥಾನದ ಆವರಣದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದು, ನಂತರ ಇದ್ದಕ್ಕಿದ್ದಂತೆ ರಸ್ತೆಗೆ ಓಡಿಹೋಗಿದ್ದರು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದರೂ ಆರಂಭದಲ್ಲಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈ ಬಗ್ಗೆ ಕೊಲ್ಲೂರು ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ, ಸ್ಥಳೀಯರಿಂದ ಬಂದ ಮಾಹಿತಿ ಆಧರಿಸಿ, ವಸುಧಾ ಅವರು ಸೌಪರ್ಣಿಕಾ ನದಿಗೆ ಇಳಿದಿರಬಹುದು ಎಂದು ಶಂಕಿಸಲಾಗಿತ್ತು. ಸ್ಥಳೀಯರು, ಬೈಂದೂರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಈಶ್ವರ್ ಮಲ್ಪೆ ನೇತೃತ್ವದ ರಕ್ಷಣಾ ತಂಡದಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಶನಿವಾರ, ಶೋಧ ತಂಡವು ಅವರು ನದಿಗೆ ಇಳಿದ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಅವರ ಮೃತದೇಹವನ್ನು ಪತ್ತೆಹಚ್ಚಿದೆ. ದಟ್ಟವಾದ ಅರಣ್ಯ ಪ್ರದೇಶದ ಮೂಲಕ ಕೊಚ್ಚಿ ಹೋಗಿದ್ದ ದೇಹ ಬಯಲು ಪ್ರದೇಶದಲ್ಲಿ ಮೇಲಕ್ಕೆ ಬಂದಿತ್ತು.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.