ಮಂಗಳೂರು, ಆ. 26 (DaijiworldNews/TA): ತುಳುನಾಡಿನ ಜನಪ್ರಿಯ ಕಾಮೆಡಿ ಶೋ ‘ಪ್ರೈವೇಟ್ ಚಾಲೆಂಜ್’ 200 ಎಪಿಸೋಡ್ ವಿಶೇಷ ಸಂದರ್ಭವನ್ನು ದೈಜಿ ವರ್ಲ್ಡ್ ಮಾಧ್ಯಮ ಭರ್ಜರಿಯಾಗಿ ಆಚರಿಸಿತು. ಸ್ವಸ್ತಿಕ ವಾಟರ್ಫ್ರಂಟ್ನಲ್ಲಿ ಜರಗಿದ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಪ್ರಾಯೋಜಕರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.














































ಮುಖ್ಯ ಅತಿಥಿಗಳಿಗೆ ಹೂಗುಚ್ಚದೊಂದಿಗೆ ಸ್ವಾಗತಿಸುವ ಮೂಲಕ, ದೈಜಿ ವರ್ಲ್ಡ್ ಮಾಧ್ಯಮ ಸಂಸ್ಥೆಯ ನಿರ್ವಹಣಾ ನಿರ್ದೇಶಕ ಮೆಲ್ವಿನ್ ರೊಡ್ರಿಗಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟೆಲಿನೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಭವ್ಯ ಸಮಾರಂಭಕ್ಕೆ ಅನಿವಾಸಿ ಉದ್ಯಮಿ ಸುನಿಲ್ ಡಿಸೋಜಾ ಮಸ್ಕತ್, ಮುಂಬೈ ಉದ್ಯಮಿ ಅಲ್ವಿನ್ ಸಿಕ್ವೇರಾ ಹಾಗೂ ಸ್ವಸ್ತಿಕ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ರಾಘವೇಂದ್ರ ಹೊಳ್ಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಸುನಿಲ್ ಡಿಸೋಜಾ, ಅರವಿಂದ್ ಬೋಳಾರ್ ಮತ್ತು ವಾಲ್ಟರ್ ನಂದಳಿಕೆ ‘ಪ್ರೈವೇಟ್ ಚಾಲೆಂಜ್’ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ನಗುವಿನ ಹೊರತಾಗಿ, ದುಃಖದ ಕ್ಷಣಗಳಲ್ಲಿ ಸಾವಿರಾರು ಜನರ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಹಾಸ್ಯ ಶೈಲಿಯಲ್ಲಿ ಪ್ರಸ್ತುತಪಡಿಸಿ ಜನಮನ್ನಣೆಗಳಿಸಿದ್ದಾರೆ ಎಂದರು.
ರಾಘವೇಂದ್ರ ಹೊಳ್ಳ ಮಾತನಾಡುತ್ತಾ, “ದೈಜಿವರ್ಲ್ಡ್ ಯಾವಾಗಲೂ ತನ್ನ ಪ್ರೇಕ್ಷಕರ ಅಭಿರುಚಿಯನ್ನು ಅರಿತು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದೆ. ಇವುಗಳಲ್ಲಿ ‘ಪ್ರೈವೇಟ್ ಚಾಲೆಂಜ್’ ಎಂಬ ಕಾರ್ಯಕ್ರಮ ಒಂದಾಗಿದೆ. ಇದು ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಂಡಿದೆ. ಸ್ವಸ್ತಿಕ ವಾಟರ್ಫ್ರಂಟ್ನಲ್ಲಿ ಇಂತಹ ಐತಿಹಾಸಿಕ ಕ್ಷಣ ಆಯೋಜನೆಯಾಗಿರುವುದು ನಮಗೆ ಹೆಮ್ಮೆ,”ಎಂದರು.
ಈ ಸಂದರ್ಭದಲ್ಲಿ ಅರವಿಂದ್ ಬೋಳಾರ್ ಮತ್ತು ವಾಲ್ಟರ್ ನಂದಳಿಕೆ ಅವರನ್ನು ಸನ್ಮಾನಿಸಲಾಯಿತು. ತಮ್ಮ ಅನುಭವವನ್ನು ಹಂಚಿಕೊಂಡ ಅರವಿಂದ್ ಬೋಳಾರ್ ಈ ಕಾರ್ಯಕ್ರಮ ಆಕಸ್ಮಿಕವಾಗಿ ಪ್ರಾರಂಭವಾಗಿತ್ತು. ಪ್ರಶಾಂತ್ ಸಿಕೆ ಅವರು ಮಾಡಿದ ಒಂದು ಹಾಸ್ಯಕರೆಯು ಇದಕ್ಕೆ ಮೂಲ ಕಾರಣವಾಗಿತ್ತು. ನಂತರವೇ ಜನರೇ ಪಾತ್ರಗಳ ಆಯ್ಕೆ ಸೂಚಿಸುತ್ತಾ ಪ್ರೋತ್ಸಾಹ ನೀಡಿದರು. ಆ ಪ್ರೇರಣೆಗಳಿಂದಲೇ 200 ಎಪಿಸೋಡ್ಗಳ ವರೆಗೆ ಈ ಪ್ರಯಾಣ ಸಾಗಿ ಬಂತು ಎಂದರು.
ವಾಲ್ಟರ್ ನಂದಳಿಕೆ ಮಾತನಾಡಿ ಅರವಿಂದ್ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಪ್ರತಿ ಭಾನುವಾರ ಪ್ರೇಕ್ಷಕರು ಅವರ ಹೊಸ ಕಥಾಪಾತ್ರಕ್ಕಾಗಿ ಕಾಯುತ್ತಿದ್ದರು. ಆಮೇಲೆ ನಾನು ಸಹ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆ. ನಮ್ಮಿಬ್ಬರ ಜೋಡಿ ಕಾಮೆಡಿ ಜನರಿಗೆ ಮೆಚ್ಚುಗೆಯಾಯಿತು. ಈ ಯಶಸ್ಸಿಗೆ ನಿರ್ದೇಶಕರು, ತಂತ್ರಜ್ಞರು, ಪ್ರಾಯೋಜಕರು ಹಾಗೂ ಕಲಾವಿದರು ಪ್ರಮುಖ ಕಾರಣಕಾರರು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ತಾಂತ್ರಿಕ ತಂಡಕ್ಕೂ ವಿಶೇಷ ಗೌರವ ಸಲ್ಲಿಸಲಾಯಿತು. ಮೆಲ್ವಿನ್ ರೊಡ್ರಿಗಸ್ ಮತ್ತು ಅಲೆಕ್ಸಿಸ್ ಕ್ಯಾಸ್ಟೆಲಿನೋ ಅವರು ವರ್ಣಾಲಂಕಾರ ಕಲಾವಿದ ದಿನೇಶ್ ಅತ್ತಾವರ್ ಅವರನ್ನು ಸನ್ಮಾನಿಸಿದರು. ಸಂಸ್ಥೆಯ ರೊನಾಲ್ಡ್ ನಜರೆತ್ ಪೋಷಕರನ್ನು ಹಾಗು ತಾಂತ್ರಿಕ ತಂಡವನ್ನು ಗೌರವಿಸಿದರು. ಮಾನಸಾ ಮಡಿವಾಳ ಮತ್ತು ಲಾವಣ್ಯ ಎಸ್ ಅವರು ಬೋಳಾರ್ ಮತ್ತು ನಂದಳಿಕೆ ಅವರ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮ ನಿರ್ವಹಣೆ ಪ್ರಶಾಂತ್ ಸಿಕೆ ಅವರಿಂದ ನಡೆಯಿತು. ಕೊನೆಗೆ, ಸ್ಟ್ಯಾನಿ ಬೇಳ ಧನ್ಯವಾದವಿತ್ತರು. ಸಮಾರಂಭದ ಡಿಜೆ ರಾಬಿನ್ ಅವರ ಸಂಗೀತ ಕಾರ್ಯಕ್ರಮವಿತ್ತು.