ಬೆಳ್ತಂಗಡಿ, ಆ. 26 (DaijiworldNews/AA): ಚಿಕ್ಕಮಗಳೂರು ಮತ್ತು ಕರಾವಳಿಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಹೊಸ ನಿಯಮಗಳು ಜಾರಿಯಾಗಲಿವೆ. ರಾತ್ರಿ ವೇಳೆ ಚೆಕ್ಪೋಸ್ಟ್ ಮೂಲಕ ಸಾಗುವ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಸಂಚರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

ಘಾಟಿಯಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ರಾತ್ರಿ ವೇಳೆ ವಾಹನಗಳು ಕೊಟ್ಟಿಗೆಹಾರ ಚೆಕ್ಪೋಸ್ಟ್ ದಾಟಬೇಕಾದರೆ ಸಂಪೂರ್ಣ ತಪಾಸಣೆಗೊಂಡು ಐದು ವಾಹನಗಳು ಒಟ್ಟಾಗಿ ತೆರಳುವಂತೆ ನಿಯಮ ರೂಪಿಸಲಾಗಿದೆ.
ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಈಗಿರುವ ಬ್ಯಾರಿಕೇಡ್ ಬದಲಾಗಿ ಹೊಸ ಭೂಮ್ ಬ್ಯಾರಿಯರ್ ನಿರ್ಮಿಸಿ ರಾತ್ರಿ ವೇಳೆ ಓರ್ವ ಪಿಎಸ್ಐ ನೇತೃತ್ವದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಒಂದೂವರೆ ಕಿ.ಮೀ. ರಸ್ತೆಯನ್ನು ಗೋ ಕಳ್ಳರು ದುರುಪಯೋಗ ಮಾಡುತ್ತಿದ್ದರು ಎನ್ನುವ ದೂರುಗಳಿದ್ದವು. ಅಲ್ಲಿ ಕೆಲವು ಮನೆಗಳಿದ್ದು, ಸ್ಥಳೀಯರ ಜತೆ ಮಾತುಕತೆ ನಡೆಸಿ ಆ ರಸ್ತೆಯಲ್ಲಿ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಈ ಗೇಟ್ ಬಂದ್ ಮಾಡಲಾಗುತ್ತದೆ. ಇನ್ನು ಗೋಕಳ್ಳತನ ಸಹಿತ ಅಪರಾಧ ಕೃತ್ಯಗಳನ್ನು ತಡೆಯಲು ಎಸ್ಪಿ ಡಾ| ವಿಕ್ರಮ್ ಅಮಟೆ ಅವರು ಈ ಯೋಜನೆ ರೂಪಿಸಿದ್ದಾರೆ.