ಉಡುಪಿ, ಆ. 22 (DaijiworldNews/AA): ಧರ್ಮಸ್ಥಳ ಸಮೀಪ ವರದಿಯಾದ ಘಟನೆಗಳಿಗೆ ಸಂಬಂಧಿಸಿದಂತೆ ಆಗಸ್ಟ್ 24 ರಂದು ರಾಜ್ಯದ 25,000ಕ್ಕೂ ಹೆಚ್ಚು ದೇವಾಲಯಗಳಲ್ಲಿ ಏಕಕಾಲದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲು ಸೌಜನ್ಯ ಹೋರಾಟ ಸಮಿತಿ ನಿರ್ಧರಿಸಿದೆ.


ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೌಜನ್ಯ ಹೋರಾಟ ಸಮಿತಿಯ ದಿನೇಶ್ ಗಾಣಿಗ ಅವರು, "ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದಲ್ಲಿ ಗಂಭೀರ ಘಟನೆಗಳು ನಡೆದರೂ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿರುವುದರಿಂದ ಇದುವರೆಗೂ ನ್ಯಾಯ ದೊರಕಿಲ್ಲ. ಇದು ಹಿಂದೂ ಧರ್ಮದ ಪಾವಿತ್ರ್ಯತೆಗೆ ಧಕ್ಕೆ ತಂದಿದೆ. ಇದರ ಜೊತೆಗೆ ಪ್ರತಿಭಟನಾಕಾರರ ವಿರುದ್ಧ ಸುಳ್ಳು ಪ್ರಚಾರವನ್ನು ಹರಡಲಾಗುತ್ತಿದೆ" ಎಂದು ಹೇಳಿದರು.
"ಆಗಸ್ಟ್ 24 ರಂದು ಏಕಕಾಲದಲ್ಲಿ ನಡೆಯಲಿರುವ ಪ್ರಾರ್ಥನೆಗಳು, ನ್ಯಾಯ ದೊರಕಿಸಿಕೊಡುವಂತೆ, ಮಡಿದ ಆತ್ಮಗಳಿಗೆ ಮುಕ್ತಿ ಸಿಗುವಂತೆ ಮತ್ತು ಸತ್ಯ ಹೊರಬರಲು ದೈವಿಕ ಹಸ್ತಕ್ಷೇಪ ಮಾಡುವಂತೆ ದೇವರಲ್ಲಿ ಬೇಡಿಕೊಳ್ಳುವ ಉದ್ದೇಶದಿಂದ ನಡೆಯಲಿದೆ" ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಅಂಬಿಕಾ ಪ್ರಭು, ಸತೀಶ್ ಶ್ರೀಯಾನ್, ತಮ್ಮಣ್ಣ ಉಪಸ್ಥಿತರಿದ್ದರು.