ಉಡುಪಿ, ಆ. 22 (DaijiworldNews/TA): ವಿದುಷಿ ದೀಕ್ಷಾ ವಿ. 9 ದಿನಗಳ ಕಾಲ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಲು ಸಜ್ಜಾಗಿದ್ದಾರೆ. ಕಾರ್ಯಕ್ರಮವು ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಮಹಾವಿದ್ಯಾಲಯದ ಸ್ನಾತಕೋತ್ತರ ಸಭಾಭವನದಲ್ಲಿ ಆಗಸ್ಟ್ 21 ರಂದು ಸಂಜೆ 3.30 ಕ್ಕೆ ಆರಂಭಗೊಂಡಿತು.

ಕಾರ್ಯಕ್ರಮವನ್ನು ಮಾಜಿ ಶಾಸಕ ರಘುಪತಿ ಭಟ್ ಹಾಗೂ ಗಣ್ಯ ಅತಿಥಿಗಳು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಮಾಜಿ ಶಾಸಕ ರಘುಪತಿ ಭಟ್ ಅವರು ಮಾತನಾಡಿ, “ದೀಕ್ಷಾ ರೆಕಾರ್ಡ್ ಸೃಷ್ಟಿಸುವ ಉದ್ದೇಶದಿಂದ ಈ ಸವಾಲನ್ನು ಕೈಗೆತ್ತಿಕೊಂಡು ಒಂಬತ್ತು ದಿನ ನೃತ್ಯ ಮಾಡಲು ಆರಂಭಿಸಿದ್ಡಾರೆ. ಮೊದಲು ಅವರು ಈ ಆಲೋಚನೆಯೊಂದಿಗೆ ಬಂದಾಗ ನನಗೆ ಆಶ್ಚರ್ಯವಾಯಿತು, ಆದರೆ ಧೈರ್ಯ, ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಎಲ್ಲವೂ ಸಾಧ್ಯ. ಅವರ ಪ್ರಯತ್ನ ಯಶಸ್ವಿಯಾಗಿ ಉಡುಪಿ ಜಿಲ್ಲೆಯ ಹೆಮ್ಮೆ ಹೆಚ್ಚಿಸಲಿ ಎಂದು ಹಾರೈಸುತ್ತೇನೆ" ಎಂದರು.
ನೃತ್ಯ ಗುರು ಶ್ರೀಧರ ರಾವ್ ಮಾತನಾಡಿ, “ನನ್ನ ವಿದ್ಯಾರ್ಥಿನಿ ದೀಕ್ಷಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಲು ಯತ್ನಿಸುತ್ತಿದ್ದು, ಅವರು ಮೊದಲು ನನ್ನ ಬಳಿಗೆ ಬಂದಾಗ, ನಾನು ಮೊದಲು ವಿದ್ವತ್ ಪರೀಕ್ಷೆ ಪೂರೈಸಿ ಸಿದ್ಧತೆ ಮಾಡಲು ಸಲಹೆ ನೀಡಿದೆ. ಇಂತಹ ಸಮರ್ಪಿತ ವಿದ್ಯಾರ್ಥಿನಿಯನ್ನು ಹೊಂದಿರುವುದು ನಮ್ಮ ಬೋಧನೆಗಳ ನಿಜವಾದ ಫಲ,” ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹೇಶ್ ಠಾಕೂರ್, ಗೀತಾಂಜಲಿ, ವೀಣಾ ಶೆಟ್ಟಿ, ಉಷಾ ಹೆಬ್ಬಾರ್, ದೀಕ್ಷಾ ಅವರ ಪತಿ ರಾಹುಲ್, ವಿಟಲ್ ಪೂಜಾರಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.