ಉಡುಪಿ, ಆ. 21 (DaijiworldNews/TA): ವಿವಾದಿತ ಹೇಳಿಕೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಾಥಮಿಕ ವಿಚಾರಣೆ ನಂತರ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯಕೀಯ ಪರಿಶೀಲನೆಗೊಳಪಡಿಸಲಾದ ತಿಮರೋಡಿಯನ್ನು, ನಂತರ ಬ್ರಹ್ಮಾವರ ತಾಲೂಕು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ಹೊರಡಿಸಿತು.
ತಿಮರೋಡಿ ಅವರು ಅರೆಸ್ಟ್ ಆಗುವ ಬಗ್ಗೆ ತಿಳಿದ ತಕ್ಷಣವೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣದ ಗುಂಭೀರತೆಯ ಹಿನ್ನೆಲೆಯಲ್ಲಿ ಸಂಚಾರಿ ಪೀಠವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದೀಗ ತಿಮರೋಡಿಯ ಜಾಮೀನು ಅರ್ಜಿ ವಿಚಾರಣೆ ಆಗಸ್ಟ್ 23ಕ್ಕೆ ಮುಂದೂಡಲಾಗಿದೆ.
ವಿವಾದಿತ ಹೇಳಿಕೆ ನೀಡಿದ ಬಳಿಕ ತಿಮರೋಡಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ವಕೀಲ ವಿಜಯವಾಸು ಪೂಜಾರಿ ಅವರ ಮೂಲಕ ನ್ಯಾಯಾಲಯದಲ್ಲಿ ವಾದ ಮಂಡನೆಯಾಯಿತು. ವಕೀಲರು ಈ ಪ್ರಕರಣದಲ್ಲಿ ಉಲ್ಲೇಖಿಸಲಾದ ಸೆಕ್ಷನ್ಗಳು 7 ವರ್ಷಗಳವರೆಗೆ ಶಿಕ್ಷೆಯನ್ನು ಹೊಂದಿರುವುದರಿಂದ ತ್ವರಿತ ಜಾಮೀನಿಗೆ ಅವಕಾಶ ಕಲ್ಪಿಸಬಹುದೆಂದು ಸಲಹೆ ನೀಡಿದರು. ಆದರೂ, ನ್ಯಾಯಾಲಯವು ತಾತ್ಕಾಲಿಕವಾಗಿ ಜಾಮೀನಿಗೆ ಒಪ್ಪಿಗೆ ನೀಡಿಲ್ಲ.
ಅದರೊಂದಿಗೆ, ತಿಮರೋಡಿಯ ಆರೋಗ್ಯವೂ ಪ್ರಸ್ತಾಪವಾಗಿದ್ದು, ಅವರಿಗೆ ಹೈ ಬ್ಲಡ್ ಪ್ರೆಷರ್ ಸಮಸ್ಯೆಯಿರುವುದಾಗಿ ವೈದ್ಯಕೀಯ ವರದಿಯಲ್ಲಿ ಸ್ಪಷ್ಟವಾಗಿದೆ. ಈ ಹಿನ್ನೆಲೆ, ವೈದ್ಯರು ಅವರಿಗೆ ಔಷಧಿ ನೀಡಿರುವುದಾಗಿ ತಿಳಿದು ಬಂದಿದೆ.
ಸದ್ಯ, ತಿಮರೋಡಿಯನ್ನು ಹಿರಿಯಡ್ಕ ಸಬ್ ಜೈಲಿಗೆ ಕಳುಹಿಸಲಾಗಿದ್ದು, ಆ. 23ರಂದು ನ್ಯಾಯಾಲಯ ಮತ್ತೊಮ್ಮೆ ಜಾಮೀನಿನ ಕುರಿತು ವಿಚಾರಣೆ ನಡೆಸಲಿದೆ. ತಾವು ನೀಡಿದ ಹೇಳಿಕೆಯನ್ನು ಪೊಲೀಸರು ಅಧಿಕೃತವಾಗಿ ದಾಖಲಿಸಿಕೊಂಡಿದ್ದಾರೆ.