ಮಂಗಳೂರು, ಆ. 21 (DaijiworldNews/TA): ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪ್ರಾರಂಭವಾದ ತನಿಖೆ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪದ ಮುಖವಾಗಿ ಇದ್ದ ಯೂಟ್ಯೂಬರ್ ಸಮೀರ್ ಎಮ್ಡಿಗೆ ಮಂಗಳೂರು ಜಿಲ್ಲಾ ಕೋರ್ಟ್ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದ್ದು, ತನಿಖೆಗೆ ಹೊಸ ದಿಕ್ಕು ಸಿಕ್ಕಂತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜು.12ಕ್ಕೆ ಸುಮೋಟೋ ಪ್ರಕರಣ ದಾಖಲಿಸಿದ್ದರು. ಈ ನಿಟ್ಟಿನಲ್ಲಿ ಸಮೀರ್ ಎಂ.ಡಿ. ಮಂಗಳೂರು ನ್ಯಾಯಾಲಯಕ್ಕೆ ಆ.19ರಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುರುವಾರ ಆದೇಶ ಕಾಯ್ದಿರಿಸಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ ಎಂದು ವರದಿಯಾಗಿದೆ.
ಬೆಳ್ತಂಗಡಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿರುವ ಆರೋಪದ ಮೇಲೆ, ಸಮೀರ್ ಎಮ್ಡಿಯನ್ನು ಬಂಧಿಸಲು ಮುಂದಾಗಿದ್ದರು. ಬೆಳಗಿನ ಜಾವ 6 ಗಂಟೆಗೆ ಬನ್ನೇರುಘಟ್ಟದಲ್ಲಿರುವ ಅವರ ಮನೆಗೆ ದಾಳಿ ಮಾಡಿದ ಪೊಲೀಸರು, ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದರು. ಇಂದು ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ ಎಂದು ವರದಿಯಾಗಿದೆ.
ಪ್ರಕರಣದ ಹಿನ್ನೆಲೆ : ಅನಾಮಿಕ ದೂರುದಾರನೊಬ್ಬ, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಕುರಿತು ದೂರು ನೀಡಿದ್ದರಿಂದ, ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಚಾಲನೆ ನೀಡಿತ್ತು. ಇದರೊಂದಿಗೆ ಧರ್ಮಸ್ಥಳ ಠಾಣೆಗೆ ಹಲವು ಸಂಬಂಧಿತ ದೂರುಗಳು ಬಂದಿದ್ದು, ಈ ಪ್ರಕ್ರಿಯೆ ಇನ್ನಷ್ಟು ಗಂಭೀರತೆ ಪಡೆಯಿತು. ಪ್ರಕರಣವನ್ನು ಬಹಿರಂಗಪಡಿಸಲು ಪ್ರಯತ್ನ ಮಾಡುತ್ತಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಯೂಟ್ಯೂಬರ್ ಸಮೀರ್ ಎಮ್ಡಿ ವಿರುದ್ಧವೂ ದೂರು ದಾಖಲಾಗಿದ್ದು, ಇದರಿಂದಾಗಿ ಇಬ್ಬರೂ ಸದ್ಯ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.