ಸುಳ್ಯ, ಆ. 21 (DaijiworldNews/TA): ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಾಜಿ ಸಿಎಂ ಡಿ.ದೇವರಾಜ ಅರಸುರವರ 110 ನೇ ಜನ್ಮದಿನಾಚರಣೆ ಸಮಾರಂಭ ಸುಳ್ಯ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.

ಸುಳ್ಯನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ಅಧ್ಯಕ್ಷತೆ ವಹಿಸಿ, ಉದ್ಘಾಟನೆ ನೆರವೇರಿಸಿದರು. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ವೆಂಕಪ್ಪ ಗೌಡರು ದೇವರಾಜ ಅರಸರ ಕುರಿತು ಮಾತನಾಡಿದರು. ಸಮಾಜದಲ್ಲಿ ಶೋಷಿತರಾಗಿದ್ದವರ ಧ್ವನಿಯಾಗಿ, ಅವರ ಕಲ್ಯಾಣಕ್ಕಾಗಿ ದುಡಿದವರು ದೇವರಾಜ ಅರಸರು.
ಹಳ್ಳಿ ಭಾಗದ ಮಕ್ಕಳು ಪೇಟೆಗೆ ಹೋಗಿ ವಿದ್ಯಾಭ್ಯಾಸ ಕಲಿಯುವುದು ಕಷ್ಟವಿದ್ದ ಸಂದರ್ಭ ವಸತಿ ನಿಲಯಗಳನ್ನು ಸ್ಥಾಪಿಸಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದ ಧೀಮಂತ. ಅವರ ಸ್ಮರಣೆ ನಿರಂತರವಾಗಬೇಕು" ಎಂದು ಹೇಳಿದರು. ತಾಲೂಕು ತಹಶೀಲ್ದಾರ್ ಮಂಜುಳಾ, ಸುಳ್ಯ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನಗರ ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡಂಕಿರಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.