ಮಂಗಳೂರು, ಆ. 21 (DaijiworldNews/TA): ನಗರದ ಹೊರವಲಯದ ಕುಡುಪುವಿನಲ್ಲಿ ಎ. 27ರಂದು ನಡೆದ ಮುಹಮ್ಮದ್ ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ ಜಾಮೀನು ಕೋರಿ ಹತ್ತು ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣದ ಆರೋಪಿಗಳಾದ ಅನಿಲ್ ಕುಮಾರ್ (28), ಸಾಯಿದೀಪ್ (29), ಅನಿಲ್ ಕುಮಾರ್ (31), ಯತಿರಾಜ್ (27), ಮನೀಶ್ ಶೆಟ್ಟಿ (21), ಪ್ರದೀಪ್ (36), ವಿವಿಯನ್ ಆಲ್ವರಿಸ್ (41), ಶ್ರೀದತ್ತ (32), ಧನುಷ್ (31) ಹಾಗೂ ಕಿಶೋರ್ ಕುಮಾರ್ (37) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ, ಬದಲಾದ ಸನ್ನಿವೇಶದಲ್ಲಿ ಆರೋಪಿಗಳು ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಲಿ ಎಂದು ಸೂಚಿಸಿ, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.