ಮಂಗಳೂರು, ಆ. 21 (DaijiworldNews/AK): ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನ ಆರೋಪ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.







ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉಡುಪಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ತಿಮರೋಡಿಗೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಬ್ರಹ್ಮಾವರ ಠಾಣಾ ಪೊಲೀಸರು ಉಜಿರೆ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿಯ ಮನೆಗೆ ಆಗಮಿಸಿದ್ದು, ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ವಿಷಯ ತಿಳಿದ ಅವರ ಬೆಂಬಲಿಗ ಯುವಕರ ತಂಡ ಮನೆಯ ಎದುರು ಜಮಾಯಿಸಿತ್ತು.
ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ತಿಮರೋಡಿ ಪರ ವಕೀಲರು ಪೊಲೀಸರ ಜೊತೆ ಮಾತನಾಡಿ, ತಿಮರೋಡಿ ಸ್ವತಃ ಠಾಣೆಗೆ ಹಾಜರಾಗುವುದಾಗಿ ಹೇಳಿದರು. ಅದರಂತೆ ತಿಮರೋಡಿ ಖಾಸಗಿ ಕಾರಿನಲ್ಲಿ ಉಡುಪಿ ಪೊಲೀಸರ ಜೊತೆ ತೆರಳಿದ್ದಾರೆ. ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಕೂಡಾ ಕಾರಿನಲ್ಲಿ ತೆರಳಿದ್ದಾರೆ.
ಬೆಳ್ತಂಗಡಿಯಿಂದ ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಘಟನೆ ಸಂಭವಿಸಿದೆ. ದಾರಿಯುದ್ದಕ್ಕೂ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ನಂತರದ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಉಡುಪಿ ಜಿಲ್ಲಾಧಿಕಾರಿ ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.