ಮಂಗಳೂರು, ಆ. 16 (DaijiworldNews/AA): ಶಿರಿಬಾಗಿಲು ಹಾಗೂ ಎಡಕುಮೇರಿ, ಎಡಕುಮೇರಿ-ಕಡಗರವಳ್ಳಿ, ಕಡಗರವಳ್ಳಿ-ದೋಣಿಗಾಲ್ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ ಭೂಕುಸಿತ ಉಂಟಾಗಿದೆ. ಹೀಗಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.



ಶನಿವಾರ ಸಂಜೆ ಸುಮಾರು 4.40ಕ್ಕೆ ಭೂಕುಸಿತ ಉಂಟಾಗಿದ್ದು ಹಳಿ ಸಾಮಾನ್ಯ ಸ್ಥಿತಿಗೆ ತರುವುದಕ್ಕೆ ವಿಶೇಷ ರೈಲನ್ನು ಸಕಲೇಶಪುರದಿಂದ ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಭೂಕುಸಿತದಿಂದಾಗಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಮಂಗಳೂರಿನಿಂದ ಹೊರಟ ನಂ. 07378 ಮಂಗಳೂರು ಸೆಂಟ್ರಲ್ ವಿಜಯಪುರ ಎಕ್ಸ್ಪ್ರೆಸ್ ರೈಲನ್ನು ತೋಕೂರು-ಕಾರವಾರ-ಮಡಗಾಂವ್-ಲೋಂಡ-ಹುಬ್ಬಳ್ಳಿ ಮೂಲಕ ಕಳುಹಿಸಲಾಗಿದೆ. ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಅರಸಿಕೆರೆ, ಕಡೂರು, ಹಾವೇರಿ ಮಾರ್ಗದಲ್ಲಿ ರೈಲು ಸಂಚರಿಸಿಲ್ಲ ಎನ್ನಲಾಗಿದೆ.
ನಂ. 16586 ಮುರುಡೇಶ್ವರ ಎಸ್ಎಂವಿಟಿ ಬೆಂಗಳೂರು ರೈಲು ಹಾಗೂ ನಂ.16512 ಕಣ್ಣೂರು ಬೆಂಗಳೂರು ಕೆಎಸ್ಆರ್ ಎಕ್ಸ್ಪ್ರೆಸ್ ರೈಲು ಕಾಸರಗೋಡು, ಶೋರ್ನೂರು, ಸೇಲಮ್ ಜೋಳಾಪಟ್ಟಿ ಮೂಲಕ ಸಂಚರಿಸಿದೆ. ನಂ.16596 ಕಾರವಾರ-ಕೆಎಸ್ಆರ್ ಬೆಂಗಳೂರು ರೈಲು ಕೂಡಾ ಮೇಲಿನ ಮಾರ್ಗದ ಮೂಲಕ ಸಂಚರಿಸಿದೆ ಎಂದು ವರದಿಯಾಗಿದೆ.