ಬೆಳ್ತಂಗಡಿ, ಆ. 16 (DaijiworldNews/TA): ಕರಾವಳಿಯ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ನಾಗಾರಾಧನೆ ಮತ್ತು ಭೂತರಾಧನೆಯ ನೆಲವೆಂದು ಪ್ರಸಿದ್ಧ. ಇಲ್ಲಿನ ಸಂಸ್ಕೃತಿ, ಆಚಾರ–ವಿಚಾರ, ಆಹಾರ ಪದ್ಧತಿ ಎಲ್ಲವೂ ವಿಶಿಷ್ಟ. ಅದರಂತೆಯೇ, ಜೀವಂತರಿಗಷ್ಟೇ ಅಲ್ಲ, ಅಕಾಲಿಕವಾಗಿ ಮೃತಪಟ್ಟವರ ಪ್ರೇತಾತ್ಮಗಳಿಗೂ ಮದುವೆ ನಡೆಸುವ ಒಂದು ಅಪರೂಪದ ಸಂಪ್ರದಾಯ ಇಂದಿಗೂ ಇಲ್ಲಿ ಜೀವಂತವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವೇಣೂರು ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ, ಧರ್ಮದರ್ಶಿ ರಮೇಶ್ ಅವರ ಪೌರೋಹಿತ್ಯದಲ್ಲಿ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ಪ್ರೇತಾತ್ಮಗಳಿಗೆ ಮದುವೆ ನೆರವೇರಿಸಲಾಯಿತು.




ಸುಮಾರು ನೂರಕ್ಕೂ ಹೆಚ್ಚು ಮಂದಿ ಈ ಅನನ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆಟಿ ತಿಂಗಳ ಸಂಪ್ರದಾಯ ತುಳುನಾಡಿನಲ್ಲಿ ಪ್ರೇತ ಮದುವೆ ಸಾಮಾನ್ಯವಾಗಿ ಆಟಿ (ಆಷಾಢ) ಮಾಸದಲ್ಲಿ ನಡೆಯುತ್ತದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಶಾರದಾ (ವಧು) ಮತ್ತು ಕಾಸರಗೋಡಿನ ಧರ್ಮತಡ್ಕದ ಶೇಷಾ (ವರ) ಕುಟುಂಬಗಳ ಮದುವೆ ಮತ್ತು ಬೆಳ್ತಂಗಡಿ ತಾಲೂಕಿನ ಶೇಖರ ಹಾಗೂ ಕಾಸರಗೋಡಿನ ಲಕ್ಷ್ಮೀ ಕುಟುಂಬಗಳ ಮದುವೆ ನಡೆಯಿತು.
ಬೆಳ್ಳಿಯ ತಗಡಿನಿಂದ ವರ–ವಧು ಮೂರ್ತಿಗಳನ್ನು ತಯಾರಿಸಿ ಧಾರೆ ಎರೆಯುವ ಶಾಸ್ತ್ರ ನೆರವೇರಿಸಲಾಗುತ್ತದೆ. ಹೆಣ್ಣು–ಗಂಡು ನೋಡುವ ಶಾಸ್ತ್ರದಿಂದ ಹಿಡಿದು ನಿಶ್ಚಿತಾರ್ಥ, ದಿಬ್ಬಣ, ವಸ್ತ್ರಾಭರಣ ಸಿದ್ಧಪಡಿಸುವುದು ಎಲ್ಲವೂ ನಡೆಯುತ್ತದೆ. ವಧುಗೆ ಸೀರೆ, ರವಿಕೆ, ಕರಿಮಣಿ, ಕಾಲುಂಗುರ, ಬಳೆ; ವರನಿಗೆ ಪಂಚೆ, ಶರ್ಟ್ ನೀಡಲಾಗುತ್ತದೆ. ಮದುವೆಯ ಬಳಿಕ ಅತಿಥಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ. ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರಿಗೆ ಸದ್ಗತಿಯಿಲ್ಲ ಎಂಬುದು ತುಳುವರ ಬಲವಾದ ನಂಬಿಕೆ. ಇಂತಹವರಿಗೆ ಪ್ರಾಯ ಪ್ರಬುದ್ಧವಾಗುವ ಹೊತ್ತಿಗೆ ಮದುವೆ ಮಾಡುವ ಸಂಪ್ರದಾಯ ಪೀಳಿಗೆಯಿಂದ ಪೀಳಿಗೆಗೆ ಬಂದಿದೆ. ಅನೇಕ ಕುಟುಂಬಗಳು ಪ್ರೇತ ಮದುವೆಯ ಬಳಿಕ ಕುಟುಂಬದಲ್ಲಿ ನೆಮ್ಮದಿ ಕಂಡಿರುವ ವದಂತಿಗಳಿವೆ.