ಮಂಗಳೂರು, ಆ. 16 (DaijiworldNews/AA): ಆಗಸ್ಟ್ 18ರಿಂದ ಮಂಗಳೂರಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಗಳನ್ನು ಮುಡಿಪಿನ ಸಮೀಪದ ಪಜೀರ್ನಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಲ್ಲಿ ನಡೆಸಲಾಗುತ್ತದೆ.

ಸುಧಾರಿತ ಸೆನ್ಸರ್ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಅಳವಡಿಸಲಾಗಿರುವ ಈ ಸೌಲಭ್ಯವು ಅಭ್ಯರ್ಥಿಗಳ ಕೌಶಲ್ಯಗಳನ್ನು ಹೆಚ್ಚು ನಿಖರತೆ, ಪಾರದರ್ಶಕತೆ ಮತ್ತು ವಸ್ತುನಿಷ್ಠತೆಯೊಂದಿಗೆ ಮೌಲ್ಯಮಾಪನ ಮಾಡುತ್ತದೆ. ಸ್ವಯಂಚಾಲಿತ ಪರೀಕ್ಷಾ ವಿಧಾನಕ್ಕೆ ಬದಲಾವಣೆ ಮಾಡುವುದು, ಸಾರಿಗೆ ಸೇವೆಗಳನ್ನು ಆಧುನೀಕರಣ ಮತ್ತು ಡಿಜಿಟಲೀಕರಣಗೊಳಿಸುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪಥವನ್ನು ಈ ಮೊದಲು ಉದ್ಘಾಟಿಸಲಾಗಿದ್ದರೂ, ಇದರ ಮೇಲ್ಮೈ ಜಾರುವಂತಿದ್ದ ಕಾರಣ ಸುರಕ್ಷತಾ ಕಾರಣಗಳಿಗಾಗಿ ಇದರ ಉದ್ಘಾಟನೆ ಮುಂದೂಡಲಾಗಿತ್ತು. ಪ್ರಸ್ತುತ, ಪ್ರದೇಶವನ್ನು ಸ್ವಚ್ಛಗೊಳಿಸಿ ಬಳಕೆಗೆ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ವಾಮಂಜೂರಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಆಗಸ್ಟ್ 16ರಂದು ಕೊನೆಯ ಪರೀಕ್ಷೆಗಳು ನಡೆಯಲಿದ್ದು, ನಂತರ ಎಲ್ಲಾ ಪರೀಕ್ಷಾ ಕಾರ್ಯಚಟುವಟಿಕೆಗಳು ಪಜೀರ್ಗೆ ಸ್ಥಳಾಂತರಗೊಳ್ಳಲಿವೆ. ಆಗಸ್ಟ್ 18 ಅಥವಾ ನಂತರದ ದಿನಾಂಕಗಳಲ್ಲಿ ಪರೀಕ್ಷೆಗಳಿಗೆ ಸಮಯ ನಿಗದಿಪಡಿಸಿಕೊಂಡಿರುವ ಅಭ್ಯರ್ಥಿಗಳು ಹೊಸ ಸ್ಥಳಕ್ಕೆ ಹಾಜರಾಗಬೇಕು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಮತ್ತು ಸಾರಿಗೆ ಇಲಾಖೆಯ ಉಪ ಆಯುಕ್ತ ಜಿ.ಕೆ. ಮಲ್ಲಾಡ್ ತಿಳಿಸಿದ್ದಾರೆ.