ಮಂಗಳೂರು, ಆ. 16 (DaijiworldNews/AA): ನಗರದ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಆಟೋಗಾಗಿ ಕಾಯುತ್ತಿದ್ದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ನ ನಿವಾಸಿ ಜ್ಯುವೆಲ್ಲರಿ ಅಂಗಡಿ ಮಾಲೀಕನೋರ್ವನನ್ನು ಅಪಹರಿಸಿ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನವನ್ನು ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜ್ಯುವೆಲ್ಲರಿ ಅಂಗಡಿ ಮಾಲೀಕನನ್ನು ಶ್ರೀಹರಿ ಭಾನುದಾಸ್ ಥೋರಟ್ (47) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ಜಿಲ್ಲೆಯ ಸಾಂಗ್ಲಿ ಜಿಲ್ಲೆ ತಾಸಗಾಂವ್ ಬೇಂದ್ರಿ ರೋಡ್ ಮೂಲದ ಶ್ರೀಹರಿ ಅವರು ಸದ್ಯ ಕಾಞಂಗಾಡ್ನ ಮಣಲಿಲ್ ಕೆಳಕಂಗರಾದಲ್ಲಿ ವಾಸವಾಗಿದ್ದಾರೆ.
ಆ.13ರಂದು ಕೇರಳದಿಂದ ರೈಲಿನ ಮೂಲಕ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬೆಳಗ್ಗೆ 7 ಗಂಟೆಯ ವೇಳೆಗೆ ರೈಲು ನಿಲ್ದಾಣದ ಬಳಿ ಆಟೋಗಾಗಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಆರು ಮಂದಿ ಅಪರಿಚಿತ ವ್ಯಕ್ತಿಗಳು "ನಾವು ಕಸ್ಟಮ್ಸ್ ಅಧಿಕಾರಿಗಳು, ನಿಮ್ಮನ್ನು ಪರಿಶೀಲನೆ ಮಾಡಬೇಕು ನಮ್ಮೊಂದಿಗೆ ಬನ್ನಿ' ಎಂದು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ದಾರಿ ಮಧ್ಯದಲ್ಲಿ ಶ್ರೀಹರಿ ಅವರ ಬಳಿಯಲ್ಲಿದ್ದ 35 ಲಕ್ಷ ರೂ. ಮೌಲ್ಯದ 350 ಗ್ರಾಂ ತೂಕದ ಶುದ್ಧ ಚಿನ್ನವನ್ನು ದೋಚಿ, ಕುಮಟಾ -ಶಿರಸಿ ರಸ್ತೆಯ ಅಂತ್ರವಳ್ಳಿ ಎಂಬಲ್ಲಿ ಅವರನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಶ್ರೀಹರಿ ಅವರು ಅಂದು ಸಂಜೆ ಕುಮಟಾ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ದೂರು ನೀಡಿದ್ದರು. ಘಟನೆ ನಡೆದ ಸ್ಥಳದ ಆಧಾರದಲ್ಲಿ ಇದೀಗ ಮಂಗಳೂರಿನ ಪಾಂಡೇಶ್ವರ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
ಇನ್ನು ಶ್ರೀಹರಿ ಅವರು ಚಿನ್ನದ ಗಟ್ಟಿ ಹೊಂದಿರುವ ಬಗ್ಗೆ ತಿಳಿದಿರುವವರಿಂದಲೇ ಅಥವಾ ಅವರ ಪರಿಚಿತರೇ ದರೋಡೆ ಮಾಡಿರುವ ಸಾಧ್ಯತೆಯಿದೆ. ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.