ಉಡುಪಿ, ಆ. 16 (DaijiworldNews/TA): ದೇಶದೆಲ್ಲೆಡೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ವಾತಾವರಣವಿರುವಾಗ, ಅಷ್ಟಮಿಗೆ ಹೆಸರಾಗಿರುವ ಉಡುಪಿಯ ಶ್ರೀ ಕೃಷ್ಣ ಮಠ ಮಾತ್ರ ಶಾಂತವಾಗಿದೆ. ಇದರಿಂದಾಗಿ ಸಾವಿರಾರು ಭಕ್ತರು ಹಾಗೂ ಹೂವಿನ ವ್ಯಾಪಾರಿಗಳು ನಿರಾಸೆಗೊಂಡಿದ್ದಾರೆ.

ಭಕ್ತರಿಗೆ ನಿರೀಕ್ಷಿತವಾದ ಅಷ್ಟಮಿ ವೈಭವ, ಮೊಸರು ಕುಡಿಕೆ ಅಥವಾ ಬಾಲಕೃಷ್ಣ ಶೋಭಾಯಾತ್ರೆ ಎಲ್ಲವೂ ಕಾಣದೇ ಇದ್ದ ಕಾರಣ, ಈ ಬಾರಿ ಉಡುಪಿಗೆ ಆಗಮಿಸಿದವರ ಅನುಭವ ನಿರಾಸೆಯೊಂದೇ.
ಉಡುಪಿಯಲ್ಲಿ ಅಷ್ಟಮಿ ಇಂದು ಯಾಕೆ ಇಲ್ಲ?: ಇದು ಉಡುಪಿಯ ಸೌರಮಾನ ಪರಂಪರೆ. ದೇಶದ ಇತರ ಭಾಗಗಳಲ್ಲಿ ಚಾಂದ್ರಮಾನ ಪದ್ಧತಿಗೆ ಅನುಗುಣವಾಗಿ ಜನ್ಮಾಷ್ಟಮಿ ಆಚರಿಸುತ್ತಾರೆ. ಆದರೆ ಉಡುಪಿಯಲ್ಲಿ ಮಾತ್ರ ಸೌರಮಾನ ಪದ್ಧತಿಯ ಪ್ರಕಾರ ಆಚರಣೆ ನಡೆಯುತ್ತದೆ. ಈ ವರ್ಷ ಅಷ್ಟಮಿ ತಿಥಿಗೆ ರೋಹಿಣಿ ನಕ್ಷತ್ರ ಜೋಡಣೆ ಇರುವುದರಿಂದ, ಸೆಪ್ಟೆಂಬರ್ 14, 2025 ರಂದು ಶ್ರೀಕೃಷ್ಣ ಜಯಂತಿ ಉಡುಪಿಯಲ್ಲಿ ಆಚರಿಸಲಾಗುತ್ತದೆ.
ಇಂದು ಸಾಂಕೇತಿಕ ಪೂಜೆ ಮಾತ್ರ : ಭಕ್ತರಿಗೆ ನಿರಾಶೆ ಆಗದಂತೆ, ಇಂದು ಚಂದ್ರಮಾನ ಪದ್ಧತಿಯಂತೆ ಹಬ್ಬ ಆಚರಿಸುವವರಿಗಾಗಿ ಸಾಂಕೇತಿಕ ಅರ್ಘ್ಯಪ್ರದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಉತ್ಸವ ಸಂಭ್ರಮ, ರಥಬೀದಿ ವೈಭವ, ಮೊಸರು ಕುಡಿಕೆ, ಬಾಲಕೃಷ್ಣ ವೇಷಧಾರಿಗಳು ಯಾವುದೂ ಇಲ್ಲ. ಇವೆಲ್ಲವೂ ಸೆಪ್ಟೆಂಬರ್ನಲ್ಲಿ ನಡೆಯಲಿವೆ.
ಹೂವಿನ ವ್ಯಾಪಾರಿಗಳಿಗೆ ಭಾರೀ ನಷ್ಟ : ಉಡುಪಿಯ ಅಷ್ಟಮಿಗೆ ಹೂವಿನ ವ್ಯಾಪಾರದಲ್ಲಿ ಭಾರೀ ಲಾಭ ಇರುತ್ತದೆ. ಈ ಭಾವನೆ ಹೊಂದಿಕೊಂಡು ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವಾರು ಕಡೆಗಳಿಂದ ಹೂವಿನ ವ್ಯಾಪಾರಿಗಳು ಉಡುಪಿಗೆ ಆಗಮಿಸಿದ್ದರು. ಆದರೆ ಅಷ್ಟಮಿ ಆಚರಣೆ ಇಲ್ಲದ ಕಾರಣ ಹೂವಿನ ಬೇಡಿಕೆ ಕಡಿಮೆಯಾಗಿದೆ.
ಭಕ್ತರ ನಿರಾಸೆ, ಆದರೆ ಭರವಸೆಯ ಪ್ರಾರ್ಥನೆ: ಉಡುಪಿಯು ನಿತ್ಯೋತ್ಸವದ ನಾಡು. ಇಂದು ನಿರಾಸೆ ಎದುರಾದರೂ ಭಕ್ತರೂ, ವ್ಯಾಪಾರಿಗಳೂ ಒಂದೇ ಮಾತು ಹೇಳಿದರು ಇಂದು ನಷ್ಟವಾದರೂ, ಮುಂದೆ ಆಗೋ ಹಬ್ಬದಲ್ಲಿ ಕೈ ತುಂಬಾ ದುಡಿಮೆಯಾಗಲಿ ಎಂದರು.