ಬೆಳ್ತಂಗಡಿ, ಆ. 16 (DaijiworldNews/AK):ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂಳಲಾಗಿದೆ ಎಂಬ ಅನಾಮಧೇಯ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರವೂ ಮುಂದುವರಿಸುತ್ತದೆಯೇ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ ಮತ್ತು ಸರ್ಕಾರಿ ರಜಾದಿನವಾದ ಕಾರಣ ಯಾವುದೇ ಕಾರ್ಯಾಚರಣೆ ನಡೆಸಲಾಗಿಲ್ಲ. ಆದರೆ ಆಗಸ್ಟ್ 16, ಶನಿವಾರ, ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಎಸ್ಐಟಿ ತನ್ನ ಅಂತಿಮ ಸುತ್ತಿನ ಶೋಧಗಳನ್ನು ನಡೆಸಬಹುದು ಎಂದು ಮೂಲಗಳ ತಿಳಿದು ಬಂದಿದೆ.
ದೂರುದಾರರು ಸಲ್ಲಿಸಿದ ತಲೆಬುರುಡೆಯು ಅವರಿಗೆ ಸಂಬಂಧಿಸಿಲ್ಲ ಮತ್ತು ಅದರ ಬಗ್ಗೆ ಅವರಿಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ವರದಿಯಾಗಿದೆ. ಬೇರೆ ಯಾರಾದರೂ ಅದನ್ನು ಹಸ್ತಾಂತರಿಸಿರಬಹುದು ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಡಿವೆ. ಈ ಹಿನ್ನೆಲೆಯಲ್ಲಿ, ಶನಿವಾರ ತಲೆಬುರುಡೆಯ ತನಿಖೆಯೂ ನಡೆಯಬಹುದು. ಇದು ಅಂತಿಮ ಶೋಧವೇ ಅಥವಾ ಹೆಚ್ಚಿನ ಕಾರ್ಯಾಚರಣೆಗಳು ನಡೆಯುಲಿದೆ ಎಂದು ಕಾದು ನೋಡಬೇಕಿದೆ.
ಅನಾಮಧೇಯ ದೂರುದಾರ ಮತ್ತು ಅವನ ಹಿಂದಿರುವ ಶಕ್ತಿಗಳ ಬಗ್ಗೆ ಎಸ್ಐಟಿ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ವಿಧಾನಸಭೆಯಲ್ಲಿ ಪಿತೂರಿಯ ಎಂದು ಪ್ರಸ್ತಾಪಿಸಿರುವುದು ಆರೋಪಗಳಿಗೆ ಮತ್ತಷ್ಟು ಬಲ ಬಂದಿದೆ. ಒಟ್ಟಾರೆಯಾಗಿ, ಶನಿವಾರ ಮತ್ತು ಸೋಮವಾರ ಈ ವಿಷಯದ ಬಗ್ಗೆ ಸ್ಪಷ್ಟತೆ ಹೊರ ಬೀಳುವ ಸಾಧ್ಯತೆಯಿದೆ.