ಬಂಟ್ವಾಳ, ಆ. 15 (DaijiworldNews/AK):ಇಲ್ಲಿನ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನವನ್ನು ತಾಲೂಕು ಆಡಳಿತ ಸೌಧದ ಮುಂಭಾಗ ಆಚರಿಸಲಾಯಿತು. ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ರಾಜೇಶ್ ನಾಯ್ಕ್ ವಿವಿಧ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.



ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರ್ಚನಾ ಭಟ್ ಸಂದೇಶ ನೀಡಿ ನಮಗೆ ಸಿಕ್ಕಿರುವ ಸ್ವಾತಂತ್ರ್ಯ ವನ್ನು ದುರುಪಯೋಗ ಪಡಿಸದೆ ರಾಷ್ಟ್ರದ ಪ್ರಗತಿಗೆ ಕೈ ಜೋಡಿಸಬೇಕು ಎಂದರು.
ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಸಂದರೂ ಇಂದಿಗೂ ಅನೇಕ ಮಂದಿ ಮೂಲಭೂತ ಸೌಲಭ್ಯದಿಂದ ವಂಚಿತರಾದ ಜನರಿದ್ದಾರೆ. ಅವರಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸ್ಪಂದನೆ ನೀಡುವ ಕಾರ್ಯ ಆಗಬೇಕಿದೆ ಎಂದರು.
ಬೂಡ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ಬಂಟ್ವಾಳದ ಸ್ವಾತಂತ್ರ್ಯ ಆಚರಣೆ ಉತ್ಸಾಹ ಇಲ್ಲದೆ ಮೋಡ ಕವಿದಂತಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ದ ಪ್ರಾಮುಖ್ಯತೆ, ಅದಕ್ಕಾಗಿ ಹೋರಾಡಿದವರ ಇತಿಹಾಸ ಜನರಿಗೆ ಗೊತ್ತಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಸಂಘಟಿಸಬೇಕು ಎಂದು ಆಗ್ರಹಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಶುಭ ಹಾರೈಸಿದರು. ಎಸ್ ವಿ ಎಸ್ ವಿದ್ಯಾಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಭೂಮಿಕಾ ಎಸ್. ಶೆಟ್ಟಿ ಉಪನ್ಯಾಸ ನೀಡಿದರು.
ಇಲಖಾಧಿಕಾರಿಗಳಾದ ಸಚಿನ್ ಕುಮಾರ್ ಜೋ ಪ್ರದೀಪ್ ಡಿಸೋಜಾ, ನೋಣಯ್ಯ ನಾಯ್ಕ, ಅಶೋಕ್ ಕುಮಾರ್ ರೈ, ಎಸ್.ಆರ್. ನಾಯಕ್ , ಶಶಾಂಕ್ ಪೊಲೀಸ್ ಸಂದೀಪ್ ಕೆ.ಎಸ್. ಆಶಾನಾಯಕ್, ವಿನಯ ಕುಮಾರಿ ಉಪಸ್ಥಿತರಿದ್ದರು. ಗೋಪಾಲಕೃಷ್ಣ ನೇರಳಕಟ್ಟೆ ಹಾಗೂ ಸುರೇಖ ಯಳವಾರ ಕಾರ್ಯಕ್ರಮ ನಿರೂಪಿಸಿದರು.