ಬಂಟ್ವಾಳ, ಆ. 15 (DaijiworldNews/AA): ಜಿಲ್ಲಾಧಿಕಾರಿ ನ್ಯಾಯಾಲಯದ ಮೂಲಕ ಮಂಜೂರಾದ ಜಮೀನಿನ ಪೌತಿ ಖಾತೆಯ ಕಡತ ವಿಲೇವಾರಿಗಾಗಿ ಲಂಚ ಪಡೆದು ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟ ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರ್ ಸಹಿತ ಮೂವರು ಆರೋಪಿಗಳನ್ನು ಆಗಸ್ಟ್ 14ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆ. 28ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಪತಹಶೀಲ್ದಾರ್ ರಾಜೇಶ್ ನಾಯ್ಕ, ಕೇಸ್ ವರ್ಕರ್ ಸಂತೋಷ್ ಹಾಗೂ ಮಧ್ಯವರ್ತಿ ವಾಮದಪದವಿನ ಗಣೇಶ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೂ ಲೋಕಾಯಕ್ತ ಪೊಲೀಸರು ನೋಟಿಸ್ ನೀಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಆ. 13ರಂದು ಮಧ್ಯಾಹ್ನದ ವೇಳೆ ದೂರುದಾರರಿಂದ ಬ್ರೋಕರ್ ಗಣೇಶನ ಮೂಲಕ 20 ಸಾವಿರ ರೂ. ಲಂಚ ಪಡೆದ ಉಪತಹಶೀಲ್ದಾರ್ ರಾಜೇಶ್ ನಾಯ್ಕ ಹಾಗೂ ಕೇಸ್ ವರ್ಕರ್ ಸಂತೋಷ್ನನ್ನು ವಶಕ್ಕೆ ಪಡೆದಿದ್ದು, ಗುರುವಾರ ಮುಂಜಾನೆ 5ರ ವರೆಗೂ ಆರೋಪಿಗಳ ವಿಚಾರಣೆಯೊಂದಿಗೆ ಪ್ರಕರಣದ ತನಿಖೆ ನಡೆಸಿದ್ದರು ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದ ಬಳಿಕ ದೂರುದಾರರ ತಾಯಿಯ ಪೌತಿ ಖಾತೆಯ ಕಡತವನ್ನು ಕಳೆದ ಏಪ್ರಿಲ್ನಿಂದ ತಹಶೀಲ್ದಾರ್ ಕಚೇರಿಯಲ್ಲೇ ಬಾಕಿ ಇರಿಸಿಕೊಂಡು ಅವರನ್ನು ಸತಾಯಿಸುವುದರೊಂದಿಗೆ ಬಂಧಿತರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೇಸ್ ವರ್ಕರ್ ಸಂತೋಷ್ 1,500 ರೂ. ಲಂಚ ಪಡೆದಿರುವ ಜೊತೆಗೆ ತಹಶೀಲ್ದಾರ್ಗೆ ನೀಡುವುದಕ್ಕೆ 20,000 ರೂ. ನೀಡಬೇಕು ಎಂದು ಉಪತಹಶೀಲ್ದಾರ್ ರಾಜೇಶ್ ನಾಯ್ಕ ಕೇಳಿದ್ದನು.
ಇನ್ನು ಈ ಬಗ್ಗೆ ದೂರುದಾರರು ಎಲ್ಲ ಸಾಕ್ಷಿಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರಿನ ಆಧಾರದ ಮೇರೆಗೆ ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾಯ್ಕ ಹಾಗೂ ಕೇಸ್ ವರ್ಕರ್ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆ. 13ರಂದು ಲೋಕಾಯುಕ್ತ ಪೊಲೀಸರು ಆರೋಪಿಗಳ ಲಂಚದ ಬೇಡಿಕೆಯಂತೆ ದೂರುದಾರನ ಮೂಲಕ 20,000 ರೂ. ಕೊಡಿಸಿ ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು.
ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಹೀಗಾಗಿ ಅದರ ಕುರಿತು ಯಾವುದೇ ವಿಚಾರವನ್ನು ತಿಳಿಸುವಂತಿಲ್ಲ. ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತನಿಖೆ ನಡೆಸುತ್ತಿದ್ದು, ತಹಶೀಲ್ದಾರ್ಗೆ ನೋಟಿಸ್ ನೀಡಿದ್ದೇವೆ. ಬಂಟ್ವಾಳ ತಾಲೂಕು ಕಚೇರಿಯಲ್ಲಿ ಬ್ರೋಕರ್ಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿರುವ ಕುರಿತು ಮಾಹಿತಿ ಲಭಿಸಿತ್ತು ಎಂದು ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಉಪತಹಶೀಲ್ದಾರ್ ರಾಜೇಶ್ ತಾನು ಸಿಕ್ಕಿ ಬೀಳುವುದನ್ನು ತಪ್ಪಿಸಲು ಬ್ರೋಕರ್ ಗಣೇಶನನ್ನು ಬಳಸಿಕೊಳ್ಳುವ ಯೋಜನೆ ರೂಪಿಸಿದ್ದ. ನೇರವಾಗಿ ಹಣ ಸ್ವೀಕರಿಸದೆ ಗಣೇಶನನ್ನು ಬಿ.ಸಿ.ರೋಡಿನ ತೋಟಗಾರಿಕೆ ಇಲಾಖೆ ಕಚೇರಿ ಬಳಿಗೆ ಕಳುಹಿಸಿದ್ದ. ಅಲ್ಲಿ ದೂರುದಾರನ ಕಾರಿನಿಂದ ಗಣೇಶ ಹಣ ಸ್ವೀಕರಿಸಿ ಬಳಿಕ ಅದನ್ನು ಉಪತಹಶೀಲ್ದಾರ್ಗೆ ನೀಡಿದ್ದಾನೆ. ಉಪತಹಶೀಲ್ದಾರ್ನನ್ನು ನಂಬಿ ಇದೀಗ ಗಣೇಶ ಕೂಡ ಪೊಲೀಸರ ಅತಿಥಿಯಾಗಿದ್ದಾನೆ.