ಉಡುಪಿ, ಆ. 15 (DaijiworldNews/AA): ದೈವಾರಾಧನೆ ಪವಿತ್ರವಾದದ್ದು ನಾಡಿನ ಮಣ್ಣಿನ ಶಕ್ತಿ ಅದರಲ್ಲಿದೆ. ಮಣ್ಣು ಮರೆತರೆ ಜೀವವೂ ಹಾಳಾಗುತ್ತದೆ. ದೈವಾರಾಧನೆಗೆ ಸ್ಪಷ್ಟ ದಾರಿ ತೋರುವ ಕಾರ್ಯವನ್ನು ವಿಶ್ವವಿದ್ಯಾಲಯಗಳು ಮಾಡಬೇಕು ಎಂದು ತುಳು ಸಾಂಸ್ಕೃತಿಕ ಚಿಂತಕ ಡಾಕ್ಟರ್ ಗಣೇಶ್ ಅಮೀನ್ ಸಂಕಮಾರ್ ಹೇಳಿದರು.





ಮಾಹೆ ವಿವಿಯಿಂದ ಕೆಎಂಸಿ ಡಾಕ್ಟರ್ ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಆಟಿದ ತುಳು ಪರ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳು ಬದುಕು, ಭಾಷೆ ಮತ್ತು ಸಂಸ್ಕೃತಿಯ ಅಗಾಧತೆ ಹಿರಿದು ಎಂದರು.
ಮಾಹೆ ಕುಲಾಧಿಪತಿ ಡಾಕ್ಟರ್ ಎಚ್.ಎಸ್. ಬಲ್ಲಾಳ್ ಮಾತನಾಡಿ, ತುಳುನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿನಿಧಿಸುವ ಈ ಕಾರ್ಯಕ್ರಮ ಮಾಹೆ ವಿವಿಯಿಂದ ನಡೆಯುತ್ತಿದ್ದು ಪ್ರತಿ ವರ್ಷವೂ ಮುಂದುವರಿಯಲಿ ಹಾಗೂ ತುಳು ನಾಡಿನ ಸಾಂಸ್ಕೃತಿಕ ಹಿನ್ನೆಲೆ, ವೈಭವವನ್ನು ಅರಿಯುವ ಪ್ರಯತ್ನವೂ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ಸಹ ಕುಲಪತಿ ಡಾಕ್ಟರ್ ನಾರಾಯಣ ಸಭಾಹಿತ್, ಮಾಹೆ ಸಿಒಒ ಆನಂದ ವೇಣುಗೋಪಾಲ್, ಕುಲಸಚಿವ ಡಾಕ್ಟರ್ ಪಿ. ಗಿರಿಧರ ಕಿಣಿ ಉಪಸ್ಥಿತರಿದ್ದರು.
ಮಾಹೆ ಪಿ.ಆರ್. ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಸ್ವಾಗತಿಸಿ, ಡಾಕ್ಟರ್ ಭರತ್ ಪ್ರಸಾದ್ ವಂದಿಸಿ, ರಕ್ಷಾ ನಿರೂಪಿಸಿದರು.
ತುಳು ಪರ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿವಿಧ ಮಳಿಗೆಗಳ ಉದ್ಘಾಟನೆ ನಡೆಯಿತು.