ಬಂಟ್ವಾಳ, ಆ. 15 (DaijiworldNews/TA): ಹಿಂದು ಜಾಗರಣ ವೇದಿಕೆ 'ಬಂಟ್ವಾಳ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಿ.ಸಿ ರೋಡಿನಲ್ಲಿ ಆ. 14ರಂದು ರಾತ್ರಿ ವೇಳೆಯಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ, ಕಳೆದುಹೋದ ಭಾಗಗಳೆಲ್ಲವನ್ನೂ ಮತ್ತೆ ಒಂದುಗೂಡಿಸುವ ಜನಜಾಗೃತಿಗಾಗಿ ರಾತ್ರಿ ವೇಳೆ ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ಹೊರಟು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವಾಗಿ 'ಸ್ಪರ್ಶ ಕಲಾ ಮಂದಿರ'ದ ವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಮಳೆಯ ನಡುವೆಯೂ ಲೆಕ್ಕಿಸದೆ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟ್ಟೆಮಾರು ಮಂತ್ರದೇವತಾ ಕ್ಷೇತ್ರ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೋನಪ್ಪ ಪೂಜಾರಿ, ನ್ಯಾಯವಾದಿ, ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಮಂಗಳೂರು ದಿಕ್ಸೂಚಿ ಭಾಷಣ ಮಾಡಿದರು.