ಕಾರ್ಕಳ, ಆ. 07 (DaijiworldNews/AA): ಶ್ರೀಗಂಧದ ಮರ ಕಳ್ಳತನದ ಪ್ರಕರಣವನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು 4 ಲಕ್ಷ ರೂ. ಮೌಲ್ಯದ ಕಳುವಾದ ಶ್ರೀಗಂಧದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.


ಬಂಧಿತರನ್ನು ಕಾರ್ಕಳ ತಾಲೂಕಿನ ಕುಕ್ಕುಂದೂರು, ಅಯ್ಯಪ್ಪ ನಗರದ ನೆಹರೂ ದುರ್ಗಾ ಪ್ರೌಢಶಾಲೆ ಬಳಿ ನಿವಾಸಿ ಗಣೇಶ್ (44), ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಸಂತೋಷ್ (35) ಮತ್ತು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಮೊಯ್ದೀನ್ ಅಲಿಯಾಸ್ ಮೊಯಿದು ಕುಂಞ (60) ಎಂದು ಗುರುತಿಸಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಅವರ ತೋಟದಲ್ಲಿ ಬೆಳೆಸಿದ್ದ 4 ಲಕ್ಷ ರೂ. ಮೌಲ್ಯದ ಒಟ್ಟು ಒಂಬತ್ತು ಶ್ರೀಗಂಧದ ಮರಗಳನ್ನು ಜೂನ್ 16ರ ರಾತ್ರಿ ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದ ಪಿಎಸ್ಐ ಪ್ರಸನ್ನ ಎಂ.ಎಸ್. ಮತ್ತು ತನಿಖಾ ವಿಭಾಗದ ಪಿಎಸ್ಐ ಸುಂದರ್ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳಿಂದ ಕಳುವಾದ ಶ್ರೀಗಂಧದ ಮರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ, ಈ ಮೂವರು ಶಿರಿಯಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಇದೇ ರೀತಿಯ ಶ್ರೀಗಂಧ ಕಳ್ಳತನಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರ್ಷ ಪ್ರಿಯಂವದಾ ಅವರ ಮೇಲ್ವಿಚಾರಣೆಯಲ್ಲಿ ಮತ್ತು ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಪಿಎಸ್ಐಗಳಾದ ಪ್ರಸನ್ನ ಎಂ.ಎಸ್. ಮತ್ತು ಸುಂದರ್, ಎಎಸ್ಐಗಳಾದ ಪ್ರಕಾಶ್ ಮತ್ತು ಸುಂದರ್ ಗೌಡ, ಹಾಗೂ ಪೊಲೀಸ್ ಕಾನ್ಸ್ಟೆಬಲ್ಗಳಾದ ರುದ್ರೇಶ್, ಚಂದ್ರಶೇಖರ್, ಸುಮಿತ್ರಾ, ಮಹಂತೇಶ್, ಸೋಮಶೇಖರ ಎಸ್.ಜಿ., ರವೀಂದ್ರ, ಆನಂದ್, ಮತ್ತು ಶಶಿಕಲಾ ಅವರನ್ನೊಳಗೊಂಡ ತಂಡವು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.