ಧರ್ಮಸ್ಥಳ,ಆ. 6 (DaijiworldNews/AK): ಧರ್ಮಸ್ಥಳದಲ್ಲಿ ನಾಲ್ವರು ಯೂಟ್ಯೂಬರ್ಗಳ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿ, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.














ಹಲ್ಲೆಗೊಳಗಾದವರು ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಇನ್ನೂ ಒಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಜನಪ್ರಿಯ ಯಾತ್ರಾ ಕೇಂದ್ರದ ಬಳಿ ಈ ಘಟನೆ ನಡೆದಿದ್ದು, ಸೌಜನ್ಯ ಪರ ಸ್ಟಿಕ್ಕರ್ಗಳು ಮತ್ತು ಬ್ಯಾನರ್ಗಳನ್ನು ಪ್ರದರ್ಶಿಸುತ್ತಾ ಬೊಲೆರೊ ವಾಹನದಲ್ಲಿ ಈ ಗುಂಪು ಆಗಮಿಸಿತ್ತು.
ಮೂಲಗಳ ಪ್ರಕಾರ, ಅಪರಿಚಿತರು ಯೂಟ್ಯೂಬರ್ಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಬೊಲೆರೊ ವಾಹನವನ್ನು ಸಂಪೂರ್ಣವಾಗಿ ಹಾನಿಗೊಳಿಸಿದ್ದಾರೆ. ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಮತ್ತು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಬ್ಯಾನರ್ ಅನ್ನು ಗುಂಪೊಂದು ಹರಿದು ಹಾಕಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆಯ ನಂತರ, ಗಾಯಗೊಂಡ ಯೂಟ್ಯೂಬರ್ಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಸ್ಥಳದಲ್ಲಿ ಜನಸಮೂಹ ಜಮಾಯಿಸಿದ ಕಾರಣ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಹಲೆ ನಡೆಸಿದವರನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.