ಮಂಗಳೂರು, ಆ. 6 (DaijiworldNews/AK): ಸಾಮಾಜಿಕ ಜಾಲತಾಣಗಳು ಬರುವ ತನಕ ಪತ್ರಿಕೋದ್ಯಮದಲ್ಲಿ ಒಂದು ಸವಾಲು ಇತ್ತು. ಅಲ್ಲದೆ ಆ ಸಮಯದಲ್ಲಿ ಫೇಕ್ ನ್ಯೂಸ್ ಎಂಬುದನ್ನು ಕೇಳಿದ್ದೇ ವಿರಳ. ಆ ಸಮಯದಲ್ಲಿ ಆನ್ ಲೈನ್ ನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಬಗ್ಗೆ ಜನರಲ್ಲಿ ಭಯ ಕೂಡ ಇತ್ತು. ಆದರೆ 2007ರಲ್ಲಿ ಯೂಟ್ಯೂಬ್ ಹಾಗೂ ಫೇಸ್ ಬುಕ್ ಬಂದ ಬಳಿಕ ನಮ್ಮ ಕೈಯಿಂದ ನಿಯಂತ್ರಣ ತಪ್ಪಿ ಹೋಯಿತು ಎಂದು ದಾಯ್ಜಿವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಹೇಳಿದರು.


ಆಗಸ್ಟ್ 6 ರ ಬುಧವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ನಡೆದ "ಮಾಧ್ಯಮ: ವರ್ತಮಾನ ಮತ್ತು ಭವಿಷ್ಯ" ವಿಷಯದ ಕುರಿತು ಚರ್ಚೆಯಲ್ಲಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ವೀಕ್ಷಕರು ಕ್ವಾಲಿಟಿಗೆ ಅಷ್ಟು ಆದ್ಯತೆ ನೀಡುತ್ತಿಲ್ಲ. ಬದಲಾಗಿ ವೀವ್ಸ್, ಲೈಕ್ಸ್, ಶೇರ್ ಸೇರಿದಂತೆ ನಂಬರ್ ಗೇಮ್ ಗೆ ಮಾತ್ರ ಪ್ರಾಧ್ಯಾನ್ಯತೆ ನೀಡಲಾಗುತ್ತಿದೆ. ಸದ್ಯ ಟಿವಿ, ರೇಡಿಯೋ, ಪ್ರಿಂಟ್ ಸೇರಿದಂತೆ ಮೀಡಿಯಾಗಳಲ್ಲಿ ರೀಡರ್ ಶಿಪ್ ಗೆ ಐದು ಜನರೇಶನ್ ಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಕೃತಕ ಬುದ್ದಿಮತ್ತೆಯು ಜಗತ್ತನ್ನೇ ಆಳಲಿದ್ದು, ಒಂದು ವೇಳೆ ನೀವು ಅದನ್ನು ತಿಳಿದುಕೊಳ್ಳದಿದ್ದರೆ ಅನಕ್ಷರಸ್ಥ ಪತ್ರಕರ್ತರಾಗುತ್ತೀರಿ. ಭವಿಷ್ಯದಲ್ಲಿ ಎಐ ನಿಮಗೆ ನೆರವು ನೀಡಲಿದೆ ಎಂದು ಅವರು ತಿಳಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪರಿಗಣಿಸುತ್ತಿರುವ ವಿದ್ಯಾರ್ಥಿಗಳು ಈ ಬದಲಾವಣೆಯನ್ನು ಅರ್ಥಮಾಡಿಕೊಳ್ಳಬೇಕೆಂದು ನಂದಳಿಕೆ ಒತ್ತಾಯಿಸಿದರು. "ನೀವು ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದರೆ, ಐದು ತಲೆಮಾರುಗಳನ್ನು ಹೇಗೆ ತೊಡಗಿಸಿಕೊಳ್ಳುವುದು ಮತ್ತು ಅವರಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವುದು ಎಂಬುದನ್ನು ನೀವು ಕಲಿಯಬೇಕು. ಇದನ್ನು ನೆನಪಿನಲ್ಲಿಡಿ ಎಂದು ಹೇಳಿದರು.