ಉಡುಪಿ, ಆ. 03 (DaijiworldNews/AA): ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ಒಂದು ತಿಂಗಳ ಹಿಂದೆ ನಡೆದ ಸರಣಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಂತರಾಜ್ಯ ಕಳವು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಮೊಹಮ್ಮದ್ ಆಸೀಫ್ ಬೆಟಗೇರಿ (28) ಎಂದು ಗುರುತಿಸಲಾಗಿದೆ. ಜುಲೈ 5ರಂದು ಕೊಡಂಕೂರು ನ್ಯೂ ಕಾಲೋನಿಯ ಮೂರು ಮನೆಗಳಲ್ಲಿ ರಾತ್ರಿ ವೇಳೆ ಕಳ್ಳತನ ನಡೆದಿದ್ದು, ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಆಸೀಫ್, ತನ್ನ ಸಹಚರರೊಂದಿಗೆ ವಾಹನದಲ್ಲಿ ಬಂದು ಮಧ್ಯರಾತ್ರಿ ಕೊಡಂಕೂರಿನ ಮೂರು ಮನೆಗಳ ಬೀಗ ಒಡೆದು ಒಳ ನುಗ್ಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಕಳವು ಮಾಡಿದ ಚಿನ್ನಾಭರಣ ಮತ್ತು ಹಣವನ್ನು ಭಟ್ಕಳ ಮತ್ತು ಶಿರಸಿಯಲ್ಲಿ ಮಾರಾಟ ಮಾಡಿ ಹಣ ಗಳಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿ ನೀಡಿದ ಮಾಹಿತಿ ಆಧರಿಸಿ, ಪೊಲೀಸರು ಭಟ್ಕಳ ಮತ್ತು ಶಿರಸಿಯಲ್ಲಿ ಮಾರಾಟ ಮಾಡಿದ್ದ ಸುಮಾರು 95.5 ಗ್ರಾಂ ತೂಕದ ಚಿನ್ನಾಭರಣ ಮತ್ತು 255 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ ಸುಮಾರು 8.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆ ಮತ್ತು ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ಮನೆ ಕಳ್ಳತನ ಮಾಡಿರುವುದಾಗಿ ಆಸಿಫ್ ಒಪ್ಪಿಕೊಂಡಿದ್ದಾನೆ. ಅಲ್ಲದೆ, ತನ್ನ ಸಹೋದರ ಆರೀಫ್, ಅನೀಸ್ ಮತ್ತು ಸಂಬಂಧಿಕರಾದ ಸಲೀಮ್ ಮತ್ತು ಶೋಯೆಬ್ ಅವರೊಂದಿಗೆ ಗೋವಾ ಮತ್ತು ಉತ್ತರ ಪ್ರದೇಶಗಳಲ್ಲಿ ಅನೇಕ ಕಳ್ಳತನ ಮತ್ತು ಇತರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ಭಾಗಿಯಾಗಿರುವ ಆಸೀಫ್ನ ಸಹೋದರ ಆರೀಫ್ ಮತ್ತು ಇತರ ಸಹಚರರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆಹಚ್ಚಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.