ಮಂಗಳೂರು, ಆ. 01 (DaijiworldNews/AA): 123 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ತಂಡವು ಬಂಧಿಸಿದ್ದು, ಗಾಂಜಾ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.



ಕಾಸರಗೋಡಿನ ಉರ್ದೂರು ಪೋಸ್ಟ್, ಆಡೂರು, ಮೊಗರು ಹೌಸ್ ನಿವಾಸಿ ಮಸೂದ್ ಎಂಕೆ(45), ಪರಪ್ಪ ದೇಲಂಪಾಡಿ ಪರಪ್ಪ ಪೋಸ್ಟ್, ಚೆಂದಮೂಲ ಹೌಸ್ ನಿವಾಸಿ ಮೊಹಮ್ಮದ್ ಆಶಿಕ್(24), ಪರಪ್ಪ ದೇಲಂಪಾಡಿ ಪರಪ್ಪ ಪೋಸ್ಟ್ ನಿವಾಸಿ ಸುಬೇರ್ ಪ್ರಾಯ(30) ಬಂಧಿತ ಆರೋಪಿಗಳು.
ಸಿಸಿಬಿ ಪೊಲೀಸರು ಜುಲೈ 31 ರಂದು 2 ಕಾರುಗಳಲ್ಲಿ ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು, ಮೂಡಬಿದಿರೆಯ ಬೆಳುವಾಯಿಯ ಕಾಂತಾವರ ಕ್ರಾಸ್ ನ ಮಠದಕೆರೆ ಎಂಬಲ್ಲಿ ಗಾಂಜಾ ಸಮೇತ 2 ವಾಹನಗಳನ್ನು ಪತ್ತೆಹಚ್ಚಿರುತ್ತಾರೆ.
ಪೊಲೀಸರು ಆರೋಪಿಗಳಿಂದ 123 ಕೆಜಿ ಗಾಂಜಾ, ಎರಡು ವಾಹನಗಳು ಮತ್ತು 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಸುಮಾರು 46,20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಂಗಳೂರು ನಗರ ಪೊಲೀಸರಿಂದ ನಿರಂತರವಾಗಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯು ಮುಂದುವರೆದಿರುತ್ತದೆ. ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದಾರೆ.