ಉಡುಪಿ, ಆ. 01 (DaijiworldNews/AA): ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಉಡುಪಿಯಲ್ಲಿ ಸಂಭವಿಸಿದೆ.

ಮೃತರನ್ನು ಕಾರ್ಕಳದ ನೀರೆ ಬೈಲೂರು ನಿವಾಸಿ ಮೊಯ್ದಿನ್ ಬಾವ (65) ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ಚಾಲಕರಿಗೆ ಎದೆ ನೋವು ಕಾಣಿಸಿಕೊಂಡಿದೆ. ಮಾರುತಿ ವೀಥಿಕಾದಲ್ಲಿ ನಡೆದು ಸಾಗುತ್ತಿದ್ದ ಸಮಾಜಸೇವಕ ನಿತ್ಯಾನಂದ ಒಳಕಾಡುವರನ್ನು ಕಂಡು ಚಾಲಕ ವಾಹನ ನಿಲ್ಲಿಸಿದ್ದು, ಎದೆನೋವಿನ ವಿಚಾರವನ್ನು ಅವರಿಗೆ ತಿಳಿಸಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ಗೆ ವ್ಯವಸ್ಥೆ ಮಾಡಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪರೀಕ್ಷಿಸಿದ ವೈದ್ಯರು ಚಾಲಕ ಮೃತಪಟ್ಟಿರುವುದು ತಿಳಿಸಿದ್ದಾರೆ.
ಅದೃಷ್ಟವಶಾತ್, ಚಾಲಕ ಎದೆನೋವು ಕಾಣಿಸಿಕೊಳ್ಳುತ್ತಿದ್ದಂತೆ ವಾಹನವನ್ನು ನಿಲ್ಲಿಸಿ ಸಹಾಯ ಕೇಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.