ಬೆಳ್ತಂಗಡಿ, ಜು. 30 (DaijiworldNews/AA): ಧರ್ಮಸ್ಥಳದ ಸಮೀಪದ ಅರಣ್ಯ ಮತ್ತು ನೇತ್ರಾವತಿ ಸ್ನಾನಘಟ್ಟದ ಪ್ರದೇಶದಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ) ನಡೆಸಿದ ಮೂರು ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರವೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.















ಜುಲೈ 30 ರಂದು ಅನಾಮಿಕ ಗುರುತಿಸಿದ ಮೊದಲ ಸ್ಥಳದಲ್ಲಿ ಅಗೆಯುವ ಕಾರ್ಯಾಚರಣೆ ನಡೆಸಿದಾಗ, ಎಸ್ಐಟಿ ತಂಡಕ್ಕೆ ಕೆಂಪು ಬ್ಲೌಸ್, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಈ ವಸ್ತುಗಳು ಭೂಮಿಯ ಮೇಲ್ಮೈಯಿಂದ ಸುಮಾರು 2.5 ಅಡಿ ಕೆಳಗೆ ಪತ್ತೆಯಾಗಿವೆ ಮತ್ತು ಇವು ಪ್ರಕರಣದಲ್ಲಿ ಪ್ರಮುಖ ತಿರುವನ್ನು ನೀಡಬಲ್ಲ ನಿರ್ಣಾಯಕ ಸಾಕ್ಷ್ಯಗಳು ಎಂದು ಅನನ್ಯಾ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್. ಅವರು ತಿಳಿಸಿದ್ದಾರೆ.
ಅನಾಮಿಕ ಗುರುತಿಸಿದ 13 ಸ್ಥಳಗಳಲ್ಲಿ ಇದುವರೆಗೆ ಮೂರು ಸ್ಥಳಗಳಲ್ಲಿ ಎಸ್ಐಟಿ ತನಿಖೆ ನಡೆಸಿದೆ. ಆದರೆ ಯಾವುದೇ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿಲ್ಲ. ಕಾರ್ಯಾಚರಣೆಯ ಮೂರನೇ ದಿನವಾದ ಇಂದು, ಎಸ್ಐಡಿ ತಂಡವು ನೇತ್ರಾವತಿ ಸ್ನಾನಘಟ್ಟದ ಸಮೀಪ ಗುರುತಿಸಲಾದ ಐದನೇ ಸ್ಥಳದಲ್ಲಿ ಶೋಧ ನಡೆಸಿತು. ಆದರೆ ಯಾವುದೇ ಯಶಸ್ಸು ದೊರೆತಿಲ್ಲ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಎಸ್ಐಟಿ ಮುಖ್ಯಸ್ಥ ಡಾ. ಪ್ರಣವ್ ಮೊಹಾಂತಿ, "ಇಲ್ಲಿಯವರೆಗೆ ಏನೂ ಸಿಕ್ಕಿಲ್ಲ. ಮುಂದೆ ಏನಾದರೂ ಸಿಗಬಹುದು ಎಂದು ಊಹಿಸಲು ನಾನು ಜ್ಯೋತಿಷಿಯಲ್ಲ. ಕಾರ್ಯಾಚರಣೆ ಮುಂದುವರಿಯುತ್ತದೆ. ಆದರೆ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಲಾಗುವುದಿಲ್ಲ" ಎಂದು ಹೇಳಿದರು.
ಎಸ್ಐಟಿ ದಟ್ಟವಾದ ಅರಣ್ಯ ಪ್ರದೇಶ ಮತ್ತು ಅಧಿಕ ಸೊಳ್ಳೆಗಳ ಕಾಟದಂತಹ ಸವಾಲಿನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 2019 ರಲ್ಲಿ ಸಂಭವಿಸಿದ ಹಿಂದಿನ ಪ್ರವಾಹದ ಸಮಯದಲ್ಲಿ, ಸ್ನಾನಘಟ್ಟದ ಪ್ರದೇಶವು ಜಲಾವೃತವಾಗಿತ್ತು, ಇದರಿಂದಾಗಿ ಸಮಾಧಿ ಮಾಡಿದ ಅವಶೇಷಗಳು ಕೊಚ್ಚಿಹೋಗಿರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಇದರ ನಡುವೆ, ಮಾಹಿತಿ ನೀಡಿದ ಅನಾಮಿಕ ವ್ಯಕ್ತಿಯು 13 ಸ್ಥಳಗಳ ಹೊರತಾಗಿ ಹೆಚ್ಚುವರಿ ಎಂಟು ಸ್ಥಳಗಳನ್ನು ಸಹ ಗುರುತಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತಿದೆ. ತನಿಖೆ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಜುಲೈ 30ರಂದು ಕಾರ್ಯಾಚರಣೆ ಮುಗಿದ ನಂತರ, ಮಾಹಿತಿ ನೀಡಿದ ಅನಾಮಿಕ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ಕಚೇರಿಗೆ ಕರೆದೊಯ್ಯಲಾಯಿತು. ಶೋಧದ ಮುಂದಿನ ಹಂತವು ಜುಲೈ 31 ಕ್ಕೆ ನಿಗದಿಯಾಗಿದ್ದು, ಆರನೇ ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಲಿದೆ.