ಉಡುಪಿ, ಜು. 30 (DaijiworldNews/AA): ಕಟಪಾಡಿಯಿಂದ ಕುಂದಾಪುರದ ಕಡೆಗೆ ಹೋಗುವ NH 66ರಲ್ಲಿ ಸಂಚರಿಸುವ ವಾಹನ ಸವಾರರು ಅಂಬಲಪಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಬಳಿ ದೊಡ್ಡ ಗುಂಡಿಗಳು ಮತ್ತು ಟ್ರಾಫಿಕ್ ಜಾಮ್ ನಿಂದಾಗಿ ಪರದಾಡುವಂತಾಗಿದೆ.









ಸರ್ವಿಸ್ ರಸ್ತೆಯಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುತ್ತಿದೆ. ಉಡುಪಿ ನಗರದ ಕಡೆಗೆ ಸಂಚಾರ ಸಂಪರ್ಕಗಳನ್ನು ಸುಗಮಗೊಳಿಸಲು ರಾಷ್ಟ್ರೀಯ ಹೆದ್ದಾರಿ 66 ರ ಅಂಬಲಪಾಡಿ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೇಲ್ಸೇತುವೆ ನಿರ್ಮಾಣ ಕಾರ್ಯವು ವೇಗವಾಗಿ ಸಾಗುತ್ತಿದೆ. ಆದರೆ NHAI ಪಕ್ಕದಲ್ಲಿರುವ ಸರ್ವಿಸ್ ರಸ್ತೆಯ ನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಪ್ರತಿದಿನ ಸಾವಿರಾರು ವಾಹನಗಳು ಸೇರಿದಂತೆ ಭಾರೀ ವಾಹನಗಳು ಈ ಮಾರ್ಗವನ್ನು ಪ್ರಮುಖ ಸಂಪರ್ಕ ಮಾರ್ಗವಾಗಿ ಬಳಸುತ್ತಿವೆ. ಸರ್ವಿಸ್ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿರುವ ಗುಂಡಿಯು ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡಿದೆ. ಗುಂಡಿಯಿಂದಾಗಿ ಕಾರು, ದ್ವಿಚಕ್ರ ವಾಹನಗಳು ಮತ್ತು ಭಾರೀ ವಾಹನಗಳು ಚಲಿಸಲು ಹೆಣಗಾಡುತ್ತಿವೆ.
ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಸರ್ವಿಸ್ ರಸ್ತೆಯಲ್ಲಿ ಹೆಚ್ಚು ವಾಹನ ಸಂಚರಿಸುತ್ತವೆ. ಮಂಗಳೂರಿನಿಂದ ಬರುವ ವಾಹನಗಳು, ಅಂಬಲಪಾಡಿಯಿಂದ ಬರುವ ವಾಹನಗಳು ಒಂದೇ ಸರ್ವಿಸ್ ರಸ್ತೆಯನ್ನು ಬಳಸುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ.
ವಾಹನ ಸವಾರರು ಎದುರಿಸುತ್ತಿರುವ ತೊಂದರೆಗಳಿಂದಾಗಿ ಉಡುಪಿ ಸಂಚಾರ ಪೊಲೀಸ್ ಠಾಣೆಯ ಸಂಚಾರ ಪೊಲೀಸರು ಬುಧವಾರ ಗುಂಡಿಯನ್ನು ಮುಚ್ಚಲು ಪ್ರಯತ್ನಿಸಿದರು. ಆದರೆ ಇದು ತಾತ್ಕಾಲಿಕ ಪರಿಹಾರವಾಗಿದ್ದು, ಅಪಾಯದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಸಮಸ್ಯೆಯನ್ನು ಪರಿಹರಿಸಲು NHAI ತುರ್ತು ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.