ಬಂಟ್ವಾಳ, ಜು. 29 (DaijiworldNews/AK):ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಬೈಕ್ ಅಪಘಾತ ಸಂಭವಿಸಿ ಸವಾರರಿಬ್ಬರಿಗೆ ಗಂಭೀರವಾದ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ದಾಸಕೋಡಿ ಸಂಬಂಧಿಕರ ಮನೆಗೆ ಹೋಗಿ ವಾಪಾಸು ಬರುತ್ತಿದ್ದ ತುಂಬೆ ನಿವಾಸಿ ಅಜಿತ್ ಹಾಗೂ ಆತನ ಸಹ ಸವಾರ ಸ್ನೇಹಿತ ಗಾಯಗೊಂಡವರು. ದಾಸಕೋಡಿ ಕಡೆಯಿಂದ ತುಂಬೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ. ಕುದ್ರೆಬೆಟ್ಟು ಎಂಬಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ನೀರು ತುಂಬಿ ಚಾಲಕರ ನಿಯಂತ್ರಣ ಕಳೆದು ಅಪಘಾತಗಳು ಸಂಭವಿಸುತ್ತಿದ್ದು , ಈ ಬಗ್ಗೆ ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ
ಬಳಿಕ ರಸ್ತೆಯಲ್ಲಿ ನಿಂತ ನೀರು ಹರಿದುಹೋಗಲು ಡಿವೈಡರ್ ಅಗೆದು ಅದರ ಮೂಲಕ ಸೂಕ್ತವಾದ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಕಾಮಗಾರಿ ಆರಂಭಿಸಿದ್ದರು. ಕಾಮಗಾರಿ ನಡೆಯುವ ಜಾಗದಲ್ಲಿ ಮಣ್ಣು ಅಗೆದು ಹಾಕಲಾಗಿದ್ದು, ಕಾಮಗಾರಿ ನಡೆಯುತ್ತಿರುವ ವೇಳೆ ವಾಹನಗಳ ತಡೆಗಾಗಿ ಹಗಲು ಹೊತ್ತಿನಲ್ಲಿ ರಸ್ತೆಯಲ್ಲಿ ಇಡಲಾದ ಕಂಪೆನಿಯ ತಡೆಬೇಲಿಗೆ ಬೈಕ್ ಡಿಕ್ಕಿಯಾಗಿದೆ.
ರಾತ್ರಿ ಹೊತ್ತಿನಲ್ಲಿ ವಾಹನ ಚಾಲಕರಿಗೆ ಕಾಣಲು ರಿಪ್ಲೆಕ್ಟರ್ ಅಳವಡಿಸದೆ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕುದ್ರೆಬೆಟ್ಟು ಸದ್ಯ ಆಕ್ಸಿಡೆಂಟ್ ಸ್ಪಾಟ್ ಆಗಿ ಪರಿವರ್ತನೆ ಆಗುತ್ತಿದ್ದು ನಿರಂತರವಾಗಿ ಅಪಘಾತ ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.