ಮಂಗಳೂರು,ಜು. 28 (DaijiworldNews/AK): ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಸದ್ಯ 13 ಸ್ಥಳಗಳನ್ನು ಗುರುತು ಮಾಡಿದ್ದಾರೆ ಎಂದು ವರದಿಯಾಗಿದೆ.

ಎಸ್ಐಟಿ ಬೆಳಗ್ಗೆ ಸ್ನಾನಘಟ್ಟದ ಎಡಭಾಗದಲ್ಲಿರುವ ಅರಣ್ಯ ಸ್ಥಳದಲ್ಲಿ ಪರಿಶೀಲನೆ ಮಾಡಿತ್ತು. ಬಳಿಕ ನೇತ್ರಾವತಿ ಸೇತುವೆ ಹಾಗೂ ಸ್ನಾನಘಟ್ಟದ ಮಧ್ಯಭಾಗದ ಕಾಡಿನಲ್ಲಿ ಸ್ಥಳ ಪರಿಶೀಲಿಸಿ, ಮೂರನೇ ಸ್ಥಳವಾಗಿ ನೇತ್ರಾವತಿ ಸ್ನಾನಘಟ್ಟದ ಬಲ ಭಾಗದ ಅಜಿಕುರಿ ರಸ್ತೆಯಲ್ಲಿ ಸ್ಥಳ ಪರಿಶೀಲನೆ ಮಾಡಿತ್ತು. ಸದ್ಯ ಈವರೆಗೆ ದೂರುದಾರ 13 ಸ್ಥಳಗಳನ್ನು ಗುರುತು ಮಾಡಿದ್ದಾರೆ ಎನ್ನಲಾಗಿದೆ.
ನೇತ್ರಾವತಿ ಸ್ನಾನಘಟ್ಟ ಹಾಗೂ ಸಮೀಪದ ಕಾಡಿನಲ್ಲಿ ಒಳಗೆ 1 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದರು. ದೂರುದಾರ ತಂದಿರುವ ತಲೆಬುರುಡೆಯಲ್ಲಿದ್ದ ಮಣ್ಣಿನ ತಾಳೆಗಾಗಿ ನೇತ್ರಾವತಿ ಸ್ನಾನಘಟ್ಟದ ಅರಣ್ಯ ಪ್ರದೇಶದಲ್ಲಿ ಮಣ್ಣನ್ನು ಎಸ್ಐಟಿ ಸಂಗ್ರಹಿಸಿದೆ. ನಂತರ ದೂರುದಾರನನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಎಸ್ಐಟಿ ತಂಡ ಕರೆದೊಯ್ದಿದೆ
ಎಸ್ಐಟಿ ವಿಚಾರಣೆ ವೇಳೆ ದೂರುದಾರ, ತಲೆ ಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೊರತೆಗೆದಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆ ಎಸ್ಐಟಿ ತಂಡವು ವಿಧಿ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಸ್ಥಳ ಮಹಜರು ಆರಂಭಿಸಿದ್ದರು.
ಎಸ್ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್, ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಸೇರಿ ಇನ್ನಿತರರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯಿತು.