ಮಂಗಳೂರು,ಜು. 28 (DaijiworldNews/AK): ಸಾಂಪ್ರದಾಯಿಕ ನೃತ್ಯದೊಂದಿಗೆ ಜಗತ್ತಿನ ಗಮನ ಸೆಳೆಯುತ್ತಿರುವ ರಿಮೋನಾ ಇವೆಟ್ಟ ಪಿರೇರಾ 13 ವರ್ಷಗಳಿಂದ ಭರತನಾಟ್ಯದಲ್ಲಿ ಶ್ರೀ ವಿದ್ಯಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.







ರೆಮೋನಾ ಕೇವಲ ಭರತನಾಟ್ಯವಲ್ಲದೆ, ಸೆಮಿ-ಕ್ಲಾಸಿಕಲ್, ವೆಸ್ಟರ್ನ್ ಮತ್ತು ಕಂಟೆಂಪರರಿ ನೃತ್ಯಗಳಲ್ಲಿಯೂ ಪರಿಣತಿ ಹೊಂದಿದ್ದು 2022ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಇದೀಗಾ ತಮ್ಮ ಸಾಧನೆಯನ್ನು ಮತ್ತೊಂದು ಹೆಜ್ಜೆ ಮುಂದಿಟ್ಟು ವಿಶ್ವ ದಾಖಲೆ ಸೃಷ್ಟಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಕಳೆದ ಜುಲೈ 21ರಂದು ತನ್ನ ದಾಖಲಾ ಪ್ರಯತ್ನ ಆರಂಭಿಸಿದ್ದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಹೆಸರು ನೋಂದಾಯಿಸುವ ಮೂಲಕ ನಿರಂತರವಾಗಿ ಏಳು ದಿನಗಳ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದಲ್ಲಿ ಪ್ರತಿ ಮೂರು ಗಂಟೆಗಳ ಪ್ರದರ್ಶನದ ನಂತರ 15 ನಿಮಿಷಗಳ ವಿಶ್ರಾಂತಿ ಪಡೆಯುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಪ್ರಸ್ತುತ ಇರುವ ವಿಶ್ವದಾಖಲೆ 127 ಗಂಟೆಗಳದ್ದಾಗಿದ್ದು ಈ ದಾಖಲೆಯನ್ನು 2023ರಲ್ಲಿ 16 ವರ್ಷದ ಸುದೀರ್ ಜಗಪತ್ ನಿರ್ಮಿಸಿದ್ದರು. ಇದೀಗಾ ಈ ದಾಖಲೆಯನ್ನು ಮಂಗಳೂರಿನ ಕುಮಾರಿ ರೆಮೋನಾ ಇವೆಟ್ ಪಿರೇರಾ ಮೀರಿಸುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿಸಿ ಭಾರತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ
ಇನ್ನೂ ಈ ದಾಖಲೆ ಮಾಡುವುದು ಅಷ್ಟು ಸುಲಭವಲ್ಲ ಕೇವಲ ನೃತ್ಯದಲ್ಲಿ ವಿಶ್ವ ದಾಖಲೆ ಮಾಡಬಹುದು ಆದ್ರೆ ಭರತನಾಟ್ಯದಲ್ಲಿ ಸಾಧನೆ ಮಾಡಿರುವುದು ಸಾಧನೆಯೇ ಸರಿ. ಸತತ 170 ಗಂಟೆ ಊಟ, ನಿದ್ದೆಯಿಲ್ಲದೇ ಕೇವಲ ಹಣ್ಣುಗಳನ್ನು ತಿಂದು ಧೃತಿಗೆಡದೇ ಸಾಧಿಸಿ ತೋರಿಸಿದ ಗೋಲ್ಡನ್ ಗರ್ಲ್ ರೆಮೋನಾ ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಡಾ. ಮನಿಷ್ ವಿಷ್ಣೋಯ್ ಹೇಳುವ ಮೂಲಕ ವಿಶ್ವ ದಾಖಲೆ ಸರ್ಟಿಫಿಕೆಟ್ ಮತ್ತು ಪದಕ ನೀಡಿ ಗೌರವಿಸಿದರು.
ಫಾ. ಪ್ರವೀಣ್ ಮಾರ್ಟಿಸ್ ಉಪ ಕುಲಪತಿ ಮಾತನಾಡಿ, ಭರತನಾಟ್ಯ ಭಾರತೀಯ ಸಂಸ್ಕೃತಿಕ ಕಲೆಯಾಗಿದ್ದು ಇತ್ತೀಚಿನ ಯುವ ಪೀಳಿಗೆ ಇಂತಹ ಶಾಸ್ತ್ರೀಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಇಷ್ಟ ಪಡುದಿಲ್ಲಾ ಎಂಬ ಭಾವನೆಯನ್ನು ಸಂಪೂರ್ಣವಾಗಿ ರೆಮೋನಾ ಈ ಭಾರಿ ಬದಲಾಯಿಸಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಕಳೆದ ಏಳು ದಿನಗಳಿಂದ ನಿರಂತವಾಗಿ ನಡೆಯುತ್ತಿರುವ ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಜಿಲ್ಲೆಯ ಜನರು ಬಂದು ಸತತವಾಗಿ ನಡೆಯುತ್ತಿರುವ ನೃತ್ಯವನ್ನು ವೀಕ್ಷಣೆ ಮಾಡಿ, ಪೋತ್ಸಾಹ ನೀಡಿದ್ದಾರೆ. ಈ ಮೂಲಕ ಇಂದು ಹೊಸ ಇತಿಹಾಸವೇ ಸೃಷ್ಟಿಯಾಗಿದೆ ಎಂದರು.
ಒಟ್ಟಿನಲ್ಲಿ ಸತತ 170 ಗಂಟೆಗಳ ಭರತನಾಟ್ಯ ನೃತ್ಯ ಪ್ರದರ್ಶಿಸಿ ಮಂಗಳೂರಿನ ಕೀರ್ತಿಗೆ ಇನ್ನೊಂದು ಗರಿಮೆಯನ್ನು ತಂದಿಟ್ಟ ದಿಟ್ಟ ಯುವತಿ ರೆಮೋನಾ...ಈ ಸಾಧನೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.