ಬೆಳ್ತಂಗಡಿ, ಜು. 28 (DaijiworldNews/AA): ಕಳೆದ ಕೆಲ ದಿನಗಳಿಂದ ಧರ್ಮಸ್ಥಳ ಸಮೀಪದ ಬೊಳಿಯಾರ್ ಬಳಿ ಆನೆಗಳು ಕೃಷಿ ನಾಶಮಾಡುತ್ತಿದ್ದಾವೆ. ಇದೀಗ ಇಂದು ಬೆಳಗ್ಗೆ ರಸ್ತೆಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.


ರಸ್ತೆ ಬದಿ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದ ವೇಳೆ ಒಂಟಿ ಸಲಗ ಬಸ್ ನಿಲ್ದಾಣದ ಕಡೆಗೆ ನುಗ್ಗಿ ಬಂದಿದೆ. ಈ ಸಂದರ್ಭ ಬಸ್ ನಿಲ್ದಾಣದಲ್ಲಿದ್ದ ಮಕ್ಕಳು ಬೃಹತ್ ಗಾತ್ರದ ಆನೆಯನ್ನು ಕಂಡು ಭಯಭೀತರಾಗಿ ಹತ್ತಿರದಲ್ಲಿದ್ದ ಅಂಗಡಿಯೊಳಗೆ ನುಗ್ಗಿ ಪರಾಗಿದ್ದಾರೆ.
ಬಳಿಕ ಆನೆ ಕಾಡಿನತ್ತ ಸಂಚರಿಸಿದ್ದು, ಸ್ವಲ್ಪದರಲ್ಲೇ ಸಂಭವನೀಯ ಅಪಾಯ ತಪ್ಪಿದೆ. ಕಳೆದ ಎರಡು ವಾರಗಳ ಹಿಂದೆಯಷ್ಟೆ ಕೊಕ್ಕಡ ಸೌತಡ್ಕ ಸಮೀಪದ ಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕಾಡಾನೆ ದಾಳಿ ಮಾಡಿ ಕೊಂದಿದ್ದು, ಈ ನಡುವೆ ಒಂಟಿ ಸಲಗ ಪ್ರತ್ಯಕ್ಷವಾಗಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ದಾಳಿಯಿಂದ ಕೃಷಿಕರು ನಷ್ಟ ಅನುಭವಿಸಿದ್ದಾರೆ. ಇದೀಗ ಈ ಮಧ್ಯೆಯೇ, ಕಾಡಾನೆಗಳು ಮಾನವನ ಮೇಲೆ ದಾಳಿ ಮಾಡಲು ಆರಂಭಿಸಿದೆ. ಇದರಿಂದ ಮುಂಜಾನೆ ಶಾಲಾ ಮಕ್ಕಳು, ಹೈನುಗಾರರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.