ಮಂಗಳೂರು, ಜು. 27 (DaijiworldNews/AK): ಸುಮಾರು 10 ವರ್ಷದಿಂದ ತಲೆಮರೆಸಿಕೊಂಡಿದ್ದ ಶೂಟೌಟ್ ಪ್ರಕರಣದ ಆರೋಪಿ ಮಹಾರಾಷ್ಟ್ರದ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಬಿಜೈಯ ಭಾರತಿ ಬಿಲ್ಡರ್ಸ್ ಕಚೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು 2014ರಲ್ಲಿ ಶೂಟೌಟ್ ನಡೆಸಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಯಾಗಿದ್ದ ಕರಾಡ್ ಗಣೇಶ್ 2015ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು. ಈತನ ವಿರುದ್ಧ ಮಂಗಳೂರಿನ ಜೆಎಂಎಫ್ಸಿ 3ನೇ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.
ಆರೋಪಿಯ ವಿರುದ್ಧ ಕಾವೂರು ಪೊಲೀಸ್ ಠಾಣೆ ಹಾಗೂ ಮಹಾರಾಷ್ಟ್ರದ ಕರಾಡ್ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ಬಂಧನ ವಿಧಿಸಿದೆ.
ಪೊಲೀಸ್ ಆಯುಕ್ತ ಸುಧೀರ್ ಕುಮಾರ ರೆಡ್ಡಿಯ ಮಾರ್ಗದರ್ಶನದಂತೆ ಉರ್ವ ಪೊಲೀಸರು ಆರೋಪಿ ಯನ್ನು ಮಹಾರಾಷ್ಟ್ರದ ಪಂಡರಾಪುರ ಎಂಬಲ್ಲಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉರ್ವ ಠಾಣಾ ನಿರೀಕ್ಷಕರ ನೇತೃತ್ವದ ಎಎಸ್ಸೈ ವೇಣುಗೋಪಾಲ್, ಹೆಡ್ ಕಾನ್ಸ್ಟೇಬಲ್ಗಳಾದ ಪ್ರಮೋದ್, ನಾರಾಯಣ, ಗೋವಿಂದರಾಜ್ ಪಾಲ್ಗೊಂಡಿದ್ದರು.