ಬಂಟ್ವಾಳ, ಜು. 26 (DaijiworldNews/AK): ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ ಹಾಗೂ ಧಾರಾಕಾರ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿ ಸಹಿತ ತಾಲೂಕಿನ ವಿವಿಧೆಡೆಯಲ್ಲಿ ಮರಗಳು ರಸ್ತೆಗೆ ಬಿದ್ದು,ಅವಾಂತರ ಸೃಷ್ಠಿಸಿದಲ್ಲದೆ ಹಲವು ಮನೆಗಳು ಹಾನಿಗೀಡಾಗಿದೆ. ಅಡಕೆ ತೋಟದಲ್ಲಿ ಮರಗಳು ಉರುಳಿ ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.


ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ ಬಾರೆಕಾಡು ಆಶ್ರಯ ಕಾಲೊನಿಯಲ್ಲಿ ಎರಡು ಮನೆಗಳ ಮಾಡು, ಹಂಚು, ಸಿಮೆಂಟ್ ಶೀಟುಗಳು ಹಾರಿ ಹೋಗಿದ್ದು, ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ಸಂಭವಿಸಿದೆ.
ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿ ಅಬ್ದುಲ್ ರಜಾಕ್ ಎಂಬವರ ಮನೆಬಳಿ ಆವರಣ ಗೋಡೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಘಟನೆಯಿಂದ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯಗಳು ಉಂಟಾಗಿಲ್ಲ. ಅದೇರೀತಿ ಬಿ.ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ಅಬ್ದುಲ್ ಹಮೀದ್ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿರುತ್ತದೆ.ಸುದ್ದಿ ತಿಳಿದ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಡಿಕೆಮರಗಳು ಧಾರಾಶಾಹಿ ರೈತರು ಕಂಗಾಲು
ಬಿರುಗಾಳಿಯ ಅಬ್ಬರಕ್ಕೆ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಕೃಷಿಕರ ಸಾವಿರಕ್ಕೂ ಅಧಿಕ ಅಡಿಕೆ ಮರಗಳು ಧಾರಾಶಾಹಿಯಾಗಿದೆ.ಕೂರಿಯಾಳ ಗ್ರಾಮದ ಮಾಯಿಲ್ ಕೋಡಿ ಹೆನ್ರಿ ಕ್ರಾಸ್ತಾ ,ಲಾರೆನ್ಸ್ ಡಿಕೋಸ್ತಾ, ಸತೀಶ್ ಶೆಟ್ಟಿ ,ರಂಜಿತ್ ಶೆಟ್ಟಿ ಹಾಗೂ ತೆಂಕ ಬೆಳ್ಳೂರು ಗ್ರಾಮ ದ ಕುಂದಬೆಟ್ಟು ಜಯರಾಮ. ಶೆಟ್ಟಿ ಹಾಗೂ ನೋಡಾಜೆಯಲ್ಲಿ ಸುಮಾರು ಒಂದು ಸಾವಿರದಷ್ಟು ಅಡಿಕೆ ಮರಗಳು ಗಾಳಿಗೆ ತುಂಡಾಗಿ ಬಿದ್ದಿದೆ ಹಾಗೆಯೇ ತೆಂಗಿನ ಮರ ಸಹಿತ ಇತರ ಮರಗಳು ಬಿದ್ದಿದ್ದು,ವಿದ್ಯುತ್ ತಂತಿ, ಕಂಬದ ಮೇಲೆ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ ,ಬಾಳೆ ಗಿಡ ಕೂಡ ಗಾಳಿಗೆ ನೆಲ ಸಮವಾಗಿದೆ.
ಒಂದೆಡೆ ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುವ ಮಳೆಗೆ ಅಡಿಕೆ ಕಾಯಿಗಳು ಕೊಳೆರೋಗಕ್ಕೆ ತುತ್ತಾಗಿ ರೈತರು ಆರ್ಥಿಕವಾಗಿ ಕಂಗಲಾಗಿದ್ದು, ಇದೀಗ ಗಾಳಿಗೆ ಫಲ ನೀಡುವ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಮರಗಳು ನೆಲಕ್ಕುರಳಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತ
ಪೆರಾಜೆ ಗ್ರಾಮದ ಮಿತ್ತಪೆರಾಜೆ ಎಂಬಲ್ಲಿ ರಾತ್ರಿ ಬೀಸಿದ ಬಿರುಗಾಳಿ ಹಾಗು ಮಳೆಗೆ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ,ಎಲಿಯನಡುಗೋಡು ಗ್ರಾಮದ ಶಾಂತ ಪೂಜಾರಿ ಎಂಬವರ ವಾಸದ ಮನೆಗೆ ಅಡಿಕೆ ಮರ ಬಿದ್ದು ಬಾಗಶ ಹಾನಿ ಆಗಿದೆ. ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮರದಡಿಗೆ ಸಿಲುಕಿದ ಕಾರು
ವ್ಯಾಗನರ್ ಕಾರೊಂದು ಮರದಡಿ ಸಿಲುಕಿರುವ ಘಟನೆ ಸಂಭವಿಸಿದ್ದು,ಕಾರು ಸಂಪೂರ್ಣ ಹಾನಿಗೊಂಡಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.ಕೇಪು ಗ್ರಾಮದ ಕಲ್ಲಂಗಳ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯ 2 ಭಾರಿ ಗಾತ್ರದ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆದ ಘಟನೆಯು ನಡೆದಿದೆ.ಸುದ್ದಿ ತಿಳಿದ ಪೊಲೀಸ್ , ಅರಣ್ಯ, ಕಂದಾಯ ಇಲಾಖೆ , ಮೆಸ್ಕಾಂ, ಗ್ರಾ.ಪಂ ಸಿಬ್ಬಂದಿಯವರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು.
ವಿಟ್ಲ ಕಸಬಾ ಗ್ರಾಮದ ದೇವಸ್ಯ ಎಂಬಲ್ಲಿ ಸರಸ್ವತಿ ಎಂಬವರ ಬಾಡಿಗೆ ಮನೆಗೆ ಮಾವಿನ ಮರ ಬಿದ್ದು ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.ಕೇಪು ಗ್ರಾಮದ ಸುಶೀಲ ಕುಕ್ಕೆಬೆಟ್ಟು ಎಂಬವರ ಮನೆಗೆ ಮರ ಬಿದ್ದು ಹಾನಿಯಾದರೆ, ಪುಣಚ ಗ್ರಾಮದ ಪರಿಯಾಲ್ತಡ್ಕ ರಮೇಶ್ ನಾಯ್ಕ ರವರ ಮನೆಗೆ ಮರಬಿದ್ದು ಹಾನಿಯಾಗಿದೆ.
ನರಿಕೊಂಬು ಗ್ರಾಮದ ಕೊಡಂಗೆಕೋಡಿ ಎಂಬಲ್ಲಿ ಲೀಲಾವತಿ ಪೂಜಾರಿ ಎಂಬವರ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿರುತ್ತದೆ.ಕೊಟ್ಟಿಗೆಯಲ್ಲಿದ್ದ ದನಗಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ತಾಲೂಕಿನ ಪಿಲಿಮೊಗರು ಗ್ರಾಮದ ಜತನಕೆರೆ ಎಂಬಲ್ಲಿ ಶಾರದಾ ನಾಯ್ಕ ರವರ ವಾಸ್ತವ್ಯದ ಮನೆಗೆ ಮರ ಬಿದ್ದು ಬಾಗಶಃ ಹಾನಿಯಾಗಿದ್ದರೆ, ಕನ್ಯಾನ ಗ್ರಾಮದ ಪಿಲಿಚಾಮುಂಡಿ ಗುಡ್ಡೆ ನಿವಾಸಿ ಕೃಷ್ಣ ನಾಯ್ಕ ಎಂಬುವವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ನರಿಕೊಂಬು ಗ್ರಾಮದ ನೆಹರು ನಗರ ಎಂಬಲ್ಲಿ ಖತೀಜಮ್ಮ ಎಂಬವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದ್ದು, ಬಾಳ್ತಿಲ ಗ್ರಾಮದ ಅಜೀಜ್ ಎಂಬವರ ವಾಸ್ತವ್ಯದ ಮನೆಗೆ ಮಳೆ ಗಾಳಿಯಿಂದ ಹಾನಿಯಾಗಿರುತ್ತದೆ. ವಿಟ್ಲ ಕಸಬಾ ಗ್ರಾಮದ ನೇತ್ರಕೆರೆ ಎಂಬಲ್ಲಿ ಶಿವಪ್ರಸಾದ್ ಅವರ ಮನೆ ಮುಂಭಾಗ ತಡೆಗೋಡೆ ಕುಸಿದಿದೆ.
ಎಲಿಯನಡುಗೋಡು ಗ್ರಾಮದ ಶಾಂತ ಪೂಜಾರಿ ಅವರ ವಾಸದ ಮನೆಗೆ ಅಡಿಕೆ ಮರ ಬಿದ್ದು ಬಾಗಶ: ಹಾನಿಯಾಗಿದೆ. ಕನ್ಯಾನ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಕನ್ಯಾನ-ಬಾಯಾರು ಪಿಡಬ್ಲ್ಯುರಸ್ತೆಗೆ ಮರಬಿದ್ದು ವಾಹನ ಸಂಚಾರಕ್ಕೆ ಕೆಲಹೊತ್ತು ಅಡಚಣೆ ಉಂಟಾಯಿತು. ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ,ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.
ಮಾಣಿಲ ಗ್ರಾಮದ ಸೊರಂಪಳ್ಳ ಅಂಗನವಾಡಿಯೊಂದರ ಬಳಿ ವಿದ್ಯುತ್ ಕಂಬದ ಮೇಲೆ ಮರಬಿದ್ದ ಪರಿಣಾಮ ಅಂಗನವಾಡಿಯ ಮೇಲ್ಛಾವಣಿ ಹಾನಿಯಾಗಿದೆ. ಕೇಪು ಗ್ರಾಮದ ಪದ್ಮನಾಭ ಆಚಾರ್ಯ ನೀರ್ಕಜೆ ಎಂಬವರ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ ಎಂದು ತಾಲೂಕಾಡಳಿತ ಮೂಲಗಳು ತಿಳಿಸಿವೆ. ಶನಿವಾರ ಹಗಲು ಹೊತ್ತು ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ನೇತ್ರಾವತಿಯಲ್ಲಿ ಬೆಳಗ್ಗಿನ ಹೊತ್ತು 6.9 ಮೀ.ಅಡಿಯಲ್ಲಿ ಹರಿದಿದ್ದು,ಸಂಜೆಯ ವೇಳೆ ಕೊಂಚ ಇಳಿಮುಖವಾಗಿತ್ತು