ಉಡುಪಿ, ಜು. 26 (DaijiworldNews/AA): "ಭಗವಾನ್ ಶ್ರೀಕೃಷ್ಣನ ದಿವ್ಯ ಬೋಧನೆಗಳು ಕರ್ಮ, ಧರ್ಮ, ಭಕ್ತಿ, ಜ್ಞಾನ ಮತ್ತು ಸೇವೆಯನ್ನು ಸಮತೋಲನಗೊಳಿಸಲು ಜೀವನದಲ್ಲಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ. ಭಗವಾನ್ ಶ್ರೀಕೃಷ್ಣನ ಸಂದೇಶದಂತೆ ಧರ್ಮದ ಹಾದಿಯಲ್ಲಿ ನಡೆದು ಸಮಾಜ ಕಲ್ಯಾಣಕ್ಕೆ ಶ್ರಮಿಸೋಣ" ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.














ಜುಲೈ 25 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಮಣ್ಣಿನ ಮಡಿಕೆಯನ್ನು ಒಡೆಯುವ ಮೂಲಕ ಉದ್ಘಾಟಿಸಿದರು. ಅವರು ದೀಪ ಬೆಳಗಿಸಿ, ಶ್ರೀಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
"ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ ಭಾರತ, ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮನಂ ಸೃಜಾಮಿ ಅಹಮ್" ಎಂಬ ಶ್ಲೋಕವನ್ನು ಉಲ್ಲೇಖಿಸಿದ ಅವರು, ಈ ಶ್ಲೋಕವು ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶವಾಗಿದೆ, ಇದು ಧರ್ಮವನ್ನು ಪುನಃಸ್ಥಾಪಿಸಲು ಮತ್ತು ದುಷ್ಟರನ್ನು ನಾಶಮಾಡಲು ಕೈಗೊಂಡ ದೈವಿಕ ಅವತಾರವನ್ನು ವಿವರಿಸುತ್ತದೆ. ಶ್ರೀಕೃಷ್ಣನ ಬೋಧನೆಗಳನ್ನು ನಾವು ಆಳವಾಗಿ ಅರ್ಥಮಾಡಿಕೊಂಡರೆ, ನಾವು ಧರ್ಮವನ್ನು ಎತ್ತಿಹಿಡಿಯಬಹುದು ಮತ್ತು ಜೀವನದಲ್ಲಿ ಯಶಸ್ಸಿನತ್ತ ಸಾಗಬಹುದು" ಎಂದು ಅಭಿಪ್ರಾಯಪಟ್ಟರು.
"ಆಧ್ಯಾತ್ಮಿಕವಾಗಿ ಮಹತ್ವಪೂರ್ಣವಾದ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ, ಉಡುಪಿಯಲ್ಲಿ ಆಯೋಜಿಸಲಾದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಉದ್ಘಾಟನಾ ಸಮಾರಂಭದ ಭಾಗವಾಗಲು ನಿಜಕ್ಕೂ ಒಂದು ಸೌಭಾಗ್ಯ. ಪ್ರತಿಷ್ಠಿತ ಅಷ್ಟ ಮಠಗಳಲ್ಲಿ ಒಂದಾದ ಈ ಮಠವು ದ್ವೈತ ವೇದಾಂತ ಪರಂಪರೆಯನ್ನು ಸಂರಕ್ಷಿಸಿ ಪ್ರಚಾರ ಮಾಡುತ್ತಾ. ಆಧುನಿಕ ಜಗತ್ತಿನಲ್ಲಿಯೂ ಅದನ್ನು ಮುಂದುವರಿಸಿದೆ. ಇದು ಭಕ್ತಿ, ಜ್ಞಾನ ಮತ್ತು ಸೇವೆ ಒಗ್ಗೂಡುವ ಸ್ಥಳವಾಗಿದೆ. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಈ ಪರಂಪರೆಗೆ ಜಾಗತಿಕ ಮನ್ನಣೆ ತಂದಿದ್ದಾರೆ. ಅಮೆರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ವೇದಾಂತ ಮತ್ತು ಸನಾತನ ಧರ್ಮದ ಪ್ರಚಾರದ ಮೂಲಕ, ಅವರು ಹೆಮ್ಮೆಯಿಂದ ಜಗತ್ತನ್ನು ಭಾರತೀಯ ತತ್ವಶಾಸ್ತ್ರದೊಂದಿಗೆ ಸಂಪರ್ಕಿಸಿದ್ದಾರೆ" ಎಂದು ಪ್ರಶಂಸೆ ವ್ಯಕ್ತಪಡಿಸಿದರು.
"ಈ ಉತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಾಗಿ ನಮ್ಮ ಸಾಂಸ್ಕೃತಿಕ ಅರಿವು, ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಸಾಮಾಜಿಕ ಏಕತೆಯನ್ನು ಪ್ರತಿಬಿಂಬಿಸುವ ಪವಿತ್ರ ಕಾರ್ಯಕ್ರಮವಾಗಿದೆ. ಭಗವಾನ್ ಶ್ರೀಕೃಷ್ಣನು ಬಾಲ್ಯ, ಯೌವನ, ರಾಜಕೀಯ, ಭಕ್ತಿ, ಜ್ಞಾನ, ಕಾರ್ಯ ಮತ್ತು ನಿಸ್ವಾರ್ಥ ಸೇವೆ ಜೀವನದ ಪ್ರತಿಯೊಂದು ಅಂಶವನ್ನೂ ಸ್ಪರ್ಶಿಸುತ್ತಾನೆ. ಪ್ರತಿಫಲ ಬಯಸದೇ ಕರ್ಮ ಯೋಗ, ಜ್ಞಾನ ಯೋಗ ಮತ್ತು ಭಕ್ತಿ ಯೋಗದ ಮೂಲಕ ಕರ್ತವ್ಯಗಳನ್ನು ನಿಸ್ವಾರ್ಥವಾಗಿ ನಿರ್ವಹಿಸಬೇಕು ಎಂದು ಭಗವಾನ್ ಶ್ರೀಕೃಷ್ಣನು ಕಲಿಸಿದ್ದಾನೆ". ಈ ಮಂಡಲೋತ್ಸವದ ಮೂಲಕ, ಭಗವಾನ್ ಶ್ರೀಕೃಷ್ಣನು ತೋರಿಸಿದ ಹಾದಿಯನ್ನು ಅನುಸರಿಸಲು, ಆಲೋಚನೆ ಮತ್ತು ನಡತೆಯಲ್ಲಿ ಧರ್ಮವನ್ನು ತುಂಬಲು, ಧರ್ಮದ ಹಾದಿಯಲ್ಲಿ ನಡೆಯಲು ಮತ್ತು ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಲು ಅವರು ಕರೆ ನೀಡಿದರು.
"ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳ ತಾಯಿ ಸಂಸ್ಕೃತವಾಗಿದೆ. ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರವ್ಯಾಪಿ ಭಾಷೆ ಮತ್ತು ಇಂಗ್ಲಿಷ್ ಅಂತರರಾಷ್ಟ್ರೀಯ ಭಾಷೆಯಾಗಿದ್ದರೆ, ಸಂಸ್ಕೃತವು ಅಂತರ-ಜಾಗತಿಕ ಭಾಷೆಯಾಗಿದೆ. ಇದರಲ್ಲಿ ಉದ್ಧತಗಳು ರೂಪುಗೊಂಡಿವೆ. ಉತ್ತರ ಭಾರತವು ದೇವರುಗಳು (ಕೃಷ್ಣ ಮತ್ತು ರಾಮ) ಅವತರಿಸಿದ ಭೂಮಿಯಾಗಿದ್ದರೆ, ದಕ್ಷಿಣ ಭಾರತವು ಆಚಾರ್ಯರು (ಮಧ್ವಾಚಾರ್ಯ, ರಾಮಾನುಜಾಚಾರ್ಯ, ಶಂಕರಾಚಾರ್ಯ) ಅವತರಿಸಿದ ಭೂಮಿಯಾಗಿದೆ. ವಾಯುದೇವನು ಕರ್ನಾಟಕದಲ್ಲಿ ಹನುಮಾನ್ ಮತ್ತು ಮಧ್ವಾಚಾರ್ಯರಾಗಿ ಅವತರಿಸಿದ್ದಾನೆ" ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಪರ್ಯಾಯ ಪುತ್ತಿಗೆ ಮಠವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕಡೆಗೋಲು ನೀಡಿ ಸನ್ಮಾನಿಸಿತು. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪುತ್ತಿಗೆ ಮಠದ ಕಿರಿಯ ಪೀಠಾಧಿಪತಿ ಶ್ರೀ ಸುಶ್ರೇಂದ್ರ ತೀರ್ಥ ಸ್ವಾಮೀಜಿಗಳು ಕೂಡ ಆಶೀರ್ವಾದ ನೀಡಿದರು.
ಕಾರ್ಯಕ್ರಮದ ವೇಳೆ, ರಾಮಚಂದ್ರ ಉಪಾಧ್ಯಾಯ ಮತ್ತು ರಾಘವೇಂದ್ರ ರಾವ್ ಅವರನ್ನು ಪುತ್ತಿಗೆ ಸ್ವಾಮೀಜಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪುತ್ತಿಗೆ ಮಠದ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕಿರಿಯ ಪೀಠಾಧಿಪತಿ ಶ್ರೀ ಸುಶ್ರೇಂದ್ರ ತೀರ್ಥ ಸ್ವಾಮೀಜಿ, ಶಾಸಕ ಯಶ್ಪಾಲ್ ಸುವರ್ಣ, ಮಾಹೆ ಮಣಿಪಾಲದ ಪ್ರೊ ಚಾನ್ಸಲರ್ ಎಚ್.ಎಸ್. ಬಲ್ಲಾಳ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.