ಉಡುಪಿ, ಜು. 26 (DaijiworldNews/AA): ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಕಳ್ಳತನ ನಡೆಸಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರು ಹಿಡಿದಿದ್ದಾರೆ.

ದುಷ್ಕರ್ಮಿಗಳು ದೇವಸ್ಥಾನದ ಮುಂಭಾಗದ ಗೇಟ್ನ ಬೀಗ ಮುರಿಯಲು ಯತ್ನಿಸಿದ್ದು, ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಅವರನ್ನು ತಡೆದಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಅವರ ಚಟುವಟಿಕೆಗಳಿಂದ ಸಂದೇಹಗೊಂಡ ಭದ್ರತಾ ಸಿಬ್ಬಂದಿ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಕಳ್ಳರು ಚಾಕುವಿನಿಂದ ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಥಳೀಯ ಭಕ್ತರಿಗೆ ಮಾಹಿತಿ ನೀಡಿದ್ದು, ಅವರು ದೇವಸ್ಥಾನದ ಆವರಣಕ್ಕೆ ಧಾವಿಸಿದ್ದಾರೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ವ್ಯಕ್ತಿಗಳು ಕಳ್ಳತನ ನಡೆಸಲು ಯತ್ನಿಸಿರುವುದು ಮತ್ತು ಅವರ ಪರಾರಿಯ ಮಾರ್ಗ ತಿಳಿದುಬಂದಿದೆ. ಈ ಮಾಹಿತಿ ಆಧಾರದ ಮೇಲೆ, ಸ್ಥಳೀಯರು ಹುಡುಕಾಟ ನಡೆಸಿ ಕಡಿಯಾಳಿ ಪೆಟ್ರೋಲ್ ಪಂಪ್ ಬಳಿ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪರಾರಿಯಾಗುವಾಗ ಒಬ್ಬ ಕಳ್ಳ ಕುಸಿದು ಬಿದ್ದಿದ್ದಾನೆ. ಇನ್ನೊಬ್ಬನನ್ನು ಪರಾರಿಯಾಗಲು ಯತ್ನಿಸಿದ್ದು, ಬಳಿಕ ಆತನನ್ನೂ ಹಿಡಿಯಲಾಯಿತು. ಇನ್ನು ಕುಸಿದು ಬಿದ್ದ ಕಳ್ಳನಿಗೆ ಕಳ್ಳತನಕ್ಕೆಂದು ತಂದಿದ್ದ ಕಬ್ಬಿಣದ ವಸ್ತು ನೀಡಿ ಸಾರ್ವಜನಿಕರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಸಾರ್ವಜನಿಕರ ಸಹಾಯದಿಂದ ಅಸ್ವಸ್ಥನಾದ ಆರೋಪಿಯನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಇಬ್ಬರು ಆರೋಪಿಗಳು ಕೇರಳ ಮೂಲದವರು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ದೇವಸ್ಥಾನದ ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.