ಕಾಸರಗೋಡು, ಜು. 26 (DaijiworldNews/AA): ಕಾಞಂಗಾಡ್ ಸೌತ್ ನಲ್ಲಿ ಅಪಘಾತಕ್ಕೀಡಾದ ಟ್ಯಾಂಕರ್ನಿಂದ ಅನಿಲವನ್ನು ಬೇರೆ ಟ್ಯಾಂಕರ್ ಗೆ ವರ್ಗಾಯಿಸಲಾಗಿದ್ದು, ಪರಿಸರದ ಜನತೆ ನಿಟ್ಟುಸಿರು ಬಿಡುವಂತಾಗಿದೆ.






ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆಯಿಂದ ವಾಹನ ಸಂಚಾರ ಪುನರಾರಂಭಿಸಲಾಗಿದೆ. ಮಂಗಳೂರಿನಿಂದ ಆಗಮಿಸಿದ ತಜ್ಞರ ತಂಡವು ಅನಿಲ ಸೋರಿಕೆ ತಡೆಗಟ್ಟಿ ಮೂರು ಟ್ಯಾಂಕರ್ ಗಳಿಗೆ ಅನಿಲವನ್ನು ತುಂಬಿಸಿದೆ. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಕಾರ್ಯಾಚರಣೆ ಮುಗಿದಿದ್ದು, ರಾತ್ರಿ 2 ಗಂಟೆ ಬಳಿಕ ವಾಹನ ಸಂಚಾರ ಪುನರಾರಂಭಗೊಂಡಿತು. ಅಧಿಕಾರಿಗಳು ಯಾವುದೇ ಅನಾಹುತ ಉಂಟಾಗದಂತೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರಿನಿಂದ ಕೊಯಮುತ್ತೂರಿಗೆ ಅನಿಲ ಸಾಗಾಟ ಮಾಡುತ್ತಿದ್ದ ಈ ಟ್ಯಾಂಕರ್ ಗುರುವಾರ ರಾತ್ರಿ ಬಸ್ಸಿಗೆ ಸೈಡ್ ನೀಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಮಗುಚಿ ಬಿದ್ದಿತ್ತು. ಅಪಘಾತದಲ್ಲಿ ಚಾಲಕ ತಮಿಳುನಾಡಿನ ಸುರೇಶ್ ಗಾಯಗೊಂಡಿದ್ದರು.
ಮೊದಲಿಗೆ ಟ್ಯಾಂಕರ್ ನಿಂದ ಅನಿಲ ಸೋರಿಕೆ ಉಂಟಾಗಿರಲಿಲ್ಲ ಆದರೆ ಪರಿಸರದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಟ್ಯಾಂಕರ್ ನ್ನು ಕ್ರೇನ್ ಬಳಸಿ ಮೇಲಕ್ಕೆತ್ತುವ ಸಂದರ್ಭದಲ್ಲಿ ಅನಿಲ ಸೋರಿಕೆ ಕಂಡುಬಂದಿತ್ತು. ಸ್ಥಳಿಯ ನಿವಾಸಿಗಳಲ್ಲಿ ಆತಂಕ ಉಂಟಾಗಿತ್ತು.
ಅನಿಲ ಸೋರಿಕೆಯಾದ ಬಗ್ಗೆ ಮಂಗಳೂರಿನ ಎಚ್ಪಿಸಿಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಾಯದಿಂದ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಾಯಿತು.