ಉಡುಪಿ, ಜು. 22 (DaijiworldNews/AA): ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯ ಆರೈಕೆಗೆ ಬಂದಿದ್ದ ಹೋಮ್ ನರ್ಸ್ ಓರ್ವಳು 7.50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ, ಪಾತ್ರೆಯನ್ನು ಕಳವು ಮಾಡಿರುವ ಘಟನೆ ಸಾಸ್ತಾನ ಸಮೀಪದ ಪಾಂಡೇಶ್ವರದಲ್ಲಿ ನಡೆದಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ ತಾಲೂಕಿನ ಚಾಮಗಾರಕೇರಿ ನಿವಾಸಿ ಶೀಲಾ ಆರೋಪಿ.
ಪಾಂಡೇಶ್ವರ ನಿವಾಸಿ ಸಿಪ್ರಿಯನ್ ಡಿ'ಅಲ್ಕೆಡಾ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿಪ್ರಿಯನ್ ಅವರು ತಮ್ಮ ವೃದ್ಧ ತಾಯಿಯನ್ನು ನೋಡಿಕೊಳ್ಳಲು ಏಜೆನ್ಸಿಯೊಂದರ ಮೂಲಕ ಹೋಂ ನರ್ಸ್ ಆಗಿ ಶೀಲಾಳನ್ನು ನೇಮಿಸಿದ್ದರು. ಆಕೆ ಮೇ 25ರಂದು ತನ್ನ ಮಗನಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಊರಿಗೆ ತೆರಳಿದ್ದಳು.
ಬಳಿಕ ಮೇ 28ರಂದು ಸಿಪ್ರಿಯನ್ ಅವರು ಮನೆಯ ಕಪಾಟನ್ನು ತೆರೆದು ನೋಡಿದಾಗ ಡ್ರಾವರ್ನಲ್ಲಿದ್ದ 5 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳು, 1.10 ಲಕ್ಷ ಮೌಲ್ಯದ ಬಳೆ ಸೆಟ್, 78 ಸಾವಿರ ರೂ. ಬೆಲೆಬಾಳುವ ಪಾತ್ರೆಗಳು ಮತ್ತು 87 ಸಾವಿರ ರೂ. ನಗದನ್ನು ಕಳವಾಗಿರುವುದು ಬೆಳಕಿಗೆ ಬಂದಿತ್ತು.
ಮೊದಲಿಗೆ ಪ್ರಕರಣವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಪ್ರಯತ್ನಿಸಿದ್ದು ಆನಂದಪುರ ಪೊಲೀಸ್ ಠಾಣೆಗೆ ಕರೆಯಿಸಿ ಮಾತುಕತೆ ನಡೆಸಲಾಗಿತ್ತು. ಆಗ ಶೀಲಾ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಅದರಲ್ಲಿ 1.30 ಲಕ್ಷ ರೂ. ಮೌಲ್ಯದ ಬ್ರಾಸ್ಲೆಟ್ ಹಾಗೂ 40 ಸಾವಿರ ರೂ. ನಗದನ್ನು ಹಿಂದಿರುಗಿಸಿದ್ದಳು. ಉಳಿದ ಹಣ ಮತ್ತು ಒಡವೆ ಹಿಂದಿರುಗಿಸಲು ಕಾಲಾವಕಾಶ ಕೋರಿದ್ದಳು.
ಮಾನವೀಯ ನೆಲೆಯಲ್ಲಿ ಸಿಪ್ರಿಯನ್ ಅವರು ಕಾಲಾವಕಾಶ ನೀಡಿದ್ದರು. ಆದರೆ ಆಕೆ ನೀಡಿದ ಗಡುವು ಕಳೆದು ಹಲವು ದಿನಗಳಾದರೂ ಯಾವುದೇ ಪ್ರತಿಕ್ರಿಯೆ ನೀಡದಿರುವ ಕಾರಣ ಸಿಪ್ರಿಯನ್ ಇದೀಗ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.