ಮಂಗಳೂರು, ಜು. 18 (DaijiworldNews/AA): ದಕ್ಷಿಣ ಕನ್ನಡದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜುಲೈ 19 ರಂದು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.

ಜುಲೈ 17ರ ರಾತ್ರಿಯಿಂದ ಜುಲೈ 18ರ ರಾತ್ರಿಯವರೆಗೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಕನಿಷ್ಠ ಏಳು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ನಗರದ ಅಡುಮರೋಳಿ ಪ್ರದೇಶದಲ್ಲಿ ಶೋಭಾ ಶೆಟ್ಟಿ ಅವರ ಮನೆಯ ಕಾಂಪೌಂಡ್ ಗೋಡೆ ಕುಸಿದು ಅಪಾರ ನಷ್ಟ ಉಂಟಾಗಿದೆ. ಪಕ್ಕದ ಮೂರ್ನಾಲ್ಕು ಮನೆಗಳ ಹಿಂಭಾಗದಲ್ಲಿ ಭೂಕುಸಿತ ಸಂಭವಿಸಿದ್ದು, ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕ ವೇದವ್ಯಾಸ ಕಾಮತ್ ಅವರು ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ 45ನೇ ಬಂದರು ವಾರ್ಡ್ನ ಪಾಂಡೇಶ್ವರ ನ್ಯೂ ರೋಡ್ನಲ್ಲಿ ನಿರಂತರ ಮಳೆಯಿಂದಾಗಿ ಒಂದು ಮನೆ ಮತ್ತು ಅದರ ತಡೆಗೋಡೆಗೆ ಹಾನಿಯಾಗಿದೆ. ಮಾಜಿ ಕಾರ್ಪೊರೇಟರ್ ಲತೀಫ್ ಕಂದಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 30.1°C ಮತ್ತು ಕನಿಷ್ಠ 22.8°C ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗವು 35 kmph ನಿಂದ 40 kmph ಗೆ ಹೆಚ್ಚಾಗುವ ನಿರೀಕ್ಷೆಯಿದ್ದು, ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.