ಉಡುಪಿ, ಜು. 15(DaijiworldNews/TA): ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಸಾಧ್ಯತೆಯಿರುವ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆ, ಜುಲೈ 18 ರ ವರೆಗೆ ಜಿಲ್ಲೆಯ ಎಲ್ಲಾ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ತಿಳಿಸಲಾಗಿದೆ.

ಸಾಂಪ್ರದಾಯಿಕ ಮೀನುಗಾರರು ಸಮುದ್ರ ದಡದಲ್ಲಿ ನಿಲ್ಲಿಸಿಟ್ಟಿರುವ ದೋಣಿ ಮತ್ತು ಬಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಸಣ್ಣ ಮತ್ತು ಮಧ್ಯಮ ದೋಣಿಗಳು ಮೀನುಗಾರಿಕೆಗೆ ತೆರಳದಂತೆ ಹಾಗೂ ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ಕಡ್ಡಾಯವಾಗಿ ಜೀವರಕ್ಷಕ ಸಾಧನಗಳನ್ನು ಬಳಸಿ ಸುರಕ್ಷಿತ ಮೀನುಗಾರಿಕೆಯನ್ನು ಕೈಗೊಳ್ಳುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.