ಉಡುಪಿ, ಜು. 14 (DaijiworldNews/TA): ಯುವ ಪೀಳಿಗೆಗೆ ಮಣ್ಣಿನ ಸಂಬಂಧವನ್ನು ಉಳಿಸಿಕೊಳ್ಳೂವುದರ ಜೊತೆಗೆ ಕೃಷಿ ಸಂಬಂಧಿತ ಕಲಿಕೆ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಭಾರತೀಯ ಕಥೊಲಿಕ ಯುವ ಸಂಚಾಲನ ಹಾಗೂ ಯುವ ವಿದ್ಯಾರ್ಥಿ ಸಂಚಾಲನದ ಯುವಕ ಯುವತಿಯರು ಬೈಲಕೆರೆಯ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಭಾನುವಾರದ ರಜಾ ದಿನವನ್ನು ಕಳೆದರು. ಸ್ವತಃ ಗದ್ದೆಗಿಳಿದು ಯುವಜನರೊಂದಿಗೆ ನೇಜಿ ನಾಟಿ ಮಾಡುವ ಮೂಲಕ ಚಾಲನೆ ನೀಡಿದ ಚರ್ಚಿನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಮಾತನಾಡಿ ರೈತರು ನಮ್ಮ ದೇಶದ ಬೆನ್ನೆಲುಬು ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.














ಇಂದು ಹಲವಾರು ಕಾರಣಗಳಿಗಾಗಿ ಕೃಷಿಯಿಂದ ರೈತರು ದೂರ ಸರಿಯುತ್ತಿದ್ದಾರೆ. ಅಧಿಕ ಕೂಲಿ, ಕಾರ್ಮಿಕರ ಕೊರತೆ ಇನ್ನಿತರ ಕಾರಣಗಳಿಂದಾಗಿ ಕೃಷಿ ಮಾಡಬೇಕಾಗಿದ್ದ ಗದ್ದೆಗಳು ಹಡಿಲು ಬೀಳುವ ಪರಿಸ್ಥಿತಿ ಉಂಟಾಗಿದೆ. ಯುವ ಜನರಿಗೆ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗಿದ್ದು ಅವರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ. ಕೃಷಿ ಪ್ರಧಾನವಾದ ನಮ್ಮ ದೇಶದ ಯುವ ಜನರು ಬೇಸಾಯದತ್ತ ಗಮನ ಹರಿಸುವ ನಿಟ್ಟಿನಲ್ಲಿ ನಮ್ಮ ಚರ್ಚಿನ ಯುವಜನರು ಹಾಗೂ ಮಹಿಳೆಯರು ಸೇರಿಕೊಂಡು ಗದ್ದೆಗಳನ್ನು ನಾಟಿ ಮಾಡುವ ಮೂಲಕ ಇದರಲ್ಲಿ ಬಂದಂತ ಫಸಲನ್ನು ಬಡಜನರಿಗೆ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು. ಗದ್ದೆಯ ಉಸ್ತುವಾರಿ ನೋಡಿಕೊಳ್ಳುವ ವಿಲ್ಮಾ ಫೆರ್ನಾಂಡಿಸ್ ಮಾತನಾಡಿ ಇಂದಿನ ಕಾಲದಲ್ಲಿ ಯುವ ಜನರಿಗೆ ಅಕ್ಕಿಯ ಮಹತ್ವವನ್ನು ತಿಳಿಸುವ ಅಗತ್ಯತೆ ಇದೆ. ಇಂದು ನಮಗೆ ಮೂರು ಹೊತ್ತಿನ ಅನ್ನ ಹೇಗೆ ಲಭಿಸುತ್ತದೆ ಎನ್ನುವ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಯುವಜನತೆ ಭತ್ತದ ಕೃಷಿ ಚಟುವಟಿಕೆಗಳನ್ನು ಅರ್ಥಮಾಡಿಕೊಂಡು ಆನಂದಿಸಬೇಕು, ಎನ್ನುವುದು ಇದರ ಮುಖ್ಯ ಉದ್ದೇಶವಾಗಿದೆ ಈ ಮೂಲಕ ಯುವ ಜನರು ಹೆಚ್ಚು ಹೆಚ್ಚು ಇಂತಹ ಕೃಷಿ ಕಾಯಕಗಳಲ್ಲಿ ತೊಡಗಿಕೊಳ್ಳುವಂತಾಗಿಲಿ ಎಂಬುದು ನಮ್ಮೆಲ್ಲರ ಬಯಕೆಯಾಗಿದೆ ಎಂದರು.
ಗದ್ದೆಯಲ್ಲಿ ಇಳಿದು ಸಸಿ ನಾಟಿ ಮಾಡಿರುವುದು ನಮಗೆ ವಿಶೇಷ ಅನುಭವ ನೀಡಿದೆ. ಕೃಷಿಯಲ್ಲಿ ಕೆಲಸ ಮಾಡುವ ರೈತರ ಪರಿಶ್ರಮವನ್ನು ನೇರವಾಗಿ ನಾವು ಗದ್ದೆಗೆ ಇಳಿದು ನಾಟಿ ಮಾಡಿದಾಗ ತಿಳಿಯಿತು ಗದ್ದೆಯಲ್ಲಿ ನಾವೆಲ್ಲರೂ ಖುಷಿಯಿಂದ ಭತ್ತದ ಸಸಿಗಳನ್ನು ನೆಟ್ಟಿದ್ದೇವೆ. ಆಗ ನಮಗೆ ರೈತರು ಎಷ್ಟೊಂದು ಕಷ್ಟಪಡುತ್ತಾರೆ ಎಂಬುದು ಅರಿವಿಗೆ ಬಂದಿದೆ. ಆದರೆ ಈ ರೀತಿ ಗದ್ದೆ ನಾಟಿ ಮಾಡಿರುವುದು ಖುಷಿಯಾಗಿದೆ" ಎಂದು ಐಸಿವೈಎಮ್ ಅಧ್ಯಕ್ಷರಾದ ರಿಯೋನ್ ಮಾರ್ಟಿಸ್ ಹೇಳಿದರು . ಈ ಸಂದರ್ಭದಲ್ಲಿ ಐಸಿವೈಎಮ್ ಮತ್ತು ವೈಸಿಎಸ್ ಸಚೇತಕಾರದ ಲೆಸ್ಲಿ ಆರೋಝಾ, ಲವೀನಾ ಆರೋಝಾ, ಆಲಿಸ್ ಮಿನೇಜಸ್, ಮಹಿಳಾ ಸದಸ್ಯರುಗಳಾದ ಸುನಿತಾ ಮಾರ್ಟಿಸ್, ಆಸಾ ಮಾರ್ಟಿಸ್, ಡೊರಿನ್ ಫೆರ್ನಾಂಡಿಸ್, ಜೊಸೇಫ್ ಪಿಂಟೊ ಹಾಗೂ ಇತರರು ಉಪಸ್ಥಿತರಿದ್ದರು.