ಬೈಂದೂರು, ಜು. 12 (DaijiworldNews/AA): ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ವರದಿಯಾಗುತ್ತಿದ್ದ ಜಾನುವಾರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಬೈಂದೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನಾಲ್ಕು ಜಾನುವಾರುಗಳನ್ನು ರಕ್ಷಿಸಿದ್ದಾರೆ.




ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಎಸ್. ಸುಧಾಕರ್ ನಾಯಕ್ ಮತ್ತು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಅವರ ಮೇಲ್ವಿಚಾರಣೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವಿತಾ ತೇಜ್ ಅವರ ನೇತೃತ್ವದಲ್ಲಿ ವಿಶೇಷ ಕಾಯಾಛರಣೆ ನಡೆಸಲಾಯಿತು.
ಪ್ರಕರಣದ ತನಿಖೆಗೆ ಮೂರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಪಿಎಸ್ಐ ತಿಮ್ಮೇಶ್ ಬಿ.ಎನ್., ಪಿಎಸ್ಐ ನವೀನ್ ಬೋರಾಕರ್ (ಬೈಂದೂರು ಠಾಣೆ), ಪಿಎಸ್ಐ ವಿನಯ್ (ಕೊಲ್ಲೂರು ಠಾಣೆ), ಮತ್ತು ಪಿಎಸ್ಐ ಬಸವರಾಜ್ (ಗಂಗೊಳ್ಳಿ ಠಾಣೆ) ಅವರು ಈ ತಂಡಗಳ ನೇತೃತ್ವ ವಹಿಸಿದ್ದರು. ಪೊಲೀಸ್ ಸಿಬ್ಬಂದಿಗಳಾದ ನಾಗೇಂದ್ರ, ಮೋಹನ್, ಸುರೇಶ್, ಚೇತನ್, ಜಯರಾಮ್, ಸತೀಶ್, ಚಿದಾನಂದ, ಮಲ್ಲಪ್ಪ ದೇಸಾಯಿ, ಶ್ರೀಧರ್ ಪಾಟೀಲ್ ಮತ್ತು ಪರಯ್ಯ ಮಾತಾಪತಿ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತನಿಖೆಯ ಭಾಗವಾಗಿ, ಸಾಸ್ತಾನದ ಮೊಹಮ್ಮದ್ ಕೈಫ್ ಮತ್ತು ಉಚ್ಚಿಲ ಕಾಪುವಿನ ಮೊಹಮ್ಮದ್ ಸುಹೈಲ್ ಖಾದರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಜಾನುವಾರುಗಳ ಅಕ್ರಮ ಸಾಗಾಣಿಕೆಗೆ ಬಳಸಲಾಗಿದ್ದ ಮೂರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಈ ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ನಾಲ್ಕು ಜಾನುವಾರುಗಳನ್ನು ರಕ್ಷಿಸಿ, ಸುರಕ್ಷಿತವಾಗಿ ಗೋಶಾಲೆಗೆ ಸ್ಥಳಾಂತರಿಸಲಾಗಿದೆ.