ಉಡುಪಿ, ಜು. 12 (DaijiworldNews/AA): ಇತ್ತೀಚೆಗೆ ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆ, ಕೋಟ ಪೊಲೀಸ್ ಠಾಣೆ ಮತ್ತು ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಅಂತರ ರಾಜ್ಯ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿರುತ್ತಾರೆ.


ಜೂನ್ 22 ರಂದು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಬಳಿ ಗಣೇಶ್ ಪ್ರಸಾದ್ ಶೆಟ್ಟಿ ರವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಒಡೆದು ಮನೆಯ ಒಳಗೆ ನುಗ್ಗಿ 1,20,00 ರೂ. ಮತ್ತು 25,000ರೂ. ಮೌಲ್ಯದ ಒಂದು ಹಳೆ ಚಿನ್ನದ ಸರವನ್ನು ಕಳ್ಳತನ ಮಾಡಿ ಹೋಗಿದ್ದು ಈ ಬಗ್ಗೆ ಗಣೇಶ್ ಪ್ರಸಾದ್ ಶೆಟ್ಟಿ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ದಾಖಲಾಗಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಹರಿರಾಮ್ ಶಂಕರ ಐಪಿಎಸ್ ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸದಾನಂದ ಎಸ್ ನಾಯಕ್ ಮತ್ತು ಪರಮೇಶ್ವರ ಹೆಗಡೆರವರ ಮಾರ್ಗದರ್ಶನದಂತೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಾಂವಧ ಐಪಿಎಸ್ ರವರ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ, ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಸಕ್ತಿವೇಲು ಮತ್ತು ಅನಿಲ್ ಕುಮಾರ್ ಮತ್ತು ಸಿಬ್ಬಂದಿಗಳಾದ ಎಎಸ್ಐ ರಾಜೇಶ್ ಪಿ, ಗಿರೀಶ್, ಹೆಡ್ ಕಾನ್ಸೆಬಲ್ ಕೃಷ್ಣ ಪ್ರಸಾದ್, ಸಂದೇಶ್ ಕುಮಾರ್, ಕಾಪು ವೃತ್ತ ಕಚೇರಿಯ ಸಿಬ್ಬಂದಿ ಜೀವನ್ ಕುಮಾರ್, ಕಾಪು ಪೊಲೀಸ್ ಠಾಣಾ ಸಿಬ್ಬಂದಿ ಮೋಹನ್ ಚಂದ್ರ, ರಘು, ಅಜೆಕಾರು ಪೋಲಿಸ್ ಠಾಣಾ ಸಿಬ್ಬಂದಿಗಳಾದ ಹೆಡ್ಕಾನ್ಸ್ಟೇಬಲ್ ಸತೀಶ್ ಮತ್ತು ಪ್ರದೀಪ್ ಶೆಟ್ಟಿ ಅವರು ಕಳ್ಳತನದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಮೊಗ್ರಾಲ್ ಪುತ್ತೂರು ಸಾಸ್ತನ ನಗರ ಎಂಬಲ್ಲಿ ವಾಸಿಸುತ್ತಿದ್ದ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಕೊಯ್ದ ಗ್ರಾಮದ ಕಲಾಯಿ ಹೌಸ್ ನಿವಾಸಿ ಇಬ್ರಾಹಿಂ ಕಲಂದರ್ ಹಾಗೂ ಕಾಸರಗೋಡು ಜಿಲ್ಲೆಯ ಕುಂಬಳೆ ಉರ್ಮಿಚಾಲ್ ಬೇಕೂರು ನಿವಾಸಿ ಮಹಮ್ಮದ್ ರಿಯಾಜ್ ಅಲಿಯಾಸ್ ಕಡಪ್ಪ ರಿಯಾಜ್ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಕಳ್ಳತನಕ್ಕೆ ಉಪಯೋಗಿಸಿದ ಟಾಟಾ ಪಂಚ್ ಕಾರನ್ನು ಮತ್ತು ರೂಪಾಯಿ 24,000 ನಗದನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿರುತ್ತದೆ.
ಆರೋಪಿಗಳ ಹಿನ್ನಲೆ
ಇಬ್ರಾಹಿಂ ಕಲಂದರ್ ವಿರುದ್ಧ ಈಗಾಗಲೇ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ 2 ದೇವಸ್ಥಾನ ಕಳವು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 1 ಮನೆ ಕಳವು, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ದರೋಡೆಗೆ ಪ್ರಯತ್ನ, ಮೇಲ್ಪರಂಬ ಠಾಣೆಯಲ್ಲಿ ಮನೆ ಕಳವು ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಮುನಿಯಲು ಸೊಸೈಟಿ ದರೋಡೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣ, ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ 4 ಮನೆ ಕಳವು ಪ್ರಕರಣ, ಕಡಬ ಪೊಲೀಸ್ ಠಾಣೆಯಲ್ಲಿ ಸರ ಕಳ್ಳತನ, ಉಪ್ಪಿನಂಗಡಿ ಠಾಣೆಯಲ್ಲಿ ಅಂಗಡಿ ಕಳವು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಂಗಡಿ ಕಳವು, ಮಡಿಕೇರಿ ಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ಆರೋಪಿಯು 2025ರ ಫೆಬ್ರವರಿ 15ರಂದು ಕೇರಳ ರಾಜ್ಯದ ಹೊಸದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಹೊಂದಿರುತ್ತಾನೆ.
ಇನ್ನೋರ್ವ ಆರೋಪಿ ಮೊಹಮ್ಮದ್ ರಿಯಾಜ್ ಅಲಿಯಾಸ್ ಅಲಿಯಾಸ್ ಕಡಪು ರಿಯಾಜ್ ಎಂಬಾತನ ವಿರುದ್ಧ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಪುತ್ತೂರು ನಗರ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯು 2025ರ ಮೇ12ರಂದು ಕಾಸರಗೋಡು ಸಬ್ ಜೈಲಿನಿಂದ ಬಿಡುಗಡೆ ಹೊಂದಿರುತ್ತಾನೆ.