ಮಂಗಳೂರು, ಜು. 10 (DaijiworldNews/AA): ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಶ ಪಡಿಸಿಕೊಳ್ಳಲಾಗಿದ್ದ ಕಾರೊಂದರ ದಾಖಲೆಯನ್ನು ದೂರುದಾರರಿಗೆ ವಾಪಾಸ್ಸು ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಕದ್ರಿ ಸಂಚಾರ ಠಾಣೆಯ ಸಿಬ್ಬಂದಿ ಗುರುವಾರ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಕದ್ರಿ ಸಂಚಾರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ತಸ್ಲಿಂ ಲೋಕಾಯುಕ್ತ ಬಲೆಗೆ ಬಿದ್ದವರು. ದೂರುದಾರರಿಂದ 5,000 ರೂ. ಲಂಚ ಪಡೆಯುತ್ತಿದ್ದಾಗಳೇ ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದೂರುದಾರರ ಕಾರು ಮತ್ತು ಸ್ಕೂಟರ್ ನಡುವೆ ಇತ್ತೀಚೆಗೆ ನಂತೂರು ಸರ್ಕಲ್ನಲ್ಲಿ ಅಪಘಾತ ಉಂಟಾಗಿತ್ತು. ಈ ಕುರಿತು ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಸ್ಲಿಂ, ಕಾರು ಮತ್ತು ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೂಚಿಸಿದ್ದು, ಅದರಂತೆ ದೂರುದಾರರು ಕಾರು ಮತ್ತು ದಾಖಲಾತಿಗಳನ್ನು ಠಾಣೆಗೆ ಒಪ್ಪಿಸಿದ್ದರು.
ಆ ನಂತರ ಕಾರನ್ನು ಠಾಣೆಯಿಂದ ಬಿಡಿಸಿಕೊಡಲು ಹೆಡ್ಕಾನ್ಸ್ಟೇಬಲ್ ತಸ್ಲಿಂ 50,000 ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ. ದೂರುದಾರರು ಈ ವಿಚಾರವನ್ನು ತನ್ನ ವಕೀಲರಲ್ಲಿ ತಿಳಿಸಿದ್ದು, ಅದರಂತೆ ವಕೀಲರು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡಿದ್ದಾರೆ. ಕಾರನ್ನು ಸ್ವೀಕರಿಸಲಾಗಿದೆ ಎಂದು ಸಹಿ ಪಡೆದಿದ್ದರೂ ಬಿಟ್ಟು ಕೊಟ್ಟಿಲ್ಲ. ಬಳಿಕ ದೂರುದಾರರ ಮೊಬೈಲನ್ನು ಬಲವಂತವಾಗಿ ಪಡೆದು ಕಾರು ಬಿಟ್ಟು ಕೊಟ್ಟಿದ್ದಾರೆ.
ಬಳಿಕ ಮೊಬೈಲನ್ನು ಹಿಂದಿರುಗಿಸುವಂತೆ ಕೇಳಿದಾಗ 50,000 ರೂ. ಲಂಚಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದಾರೆ. ಮೊಬೈಲ್ ಹಿಂತಿರುಗಿಸಬೇಕಾದರೆ ಒರಿಜಿನಲ್ ಲೈಸೆನ್ಸ್ ಅನ್ನು ಠಾಣೆಗೆ ತಂದುಕೊಡುವಂತೆ ತಿಳಿಸಿದ್ದಾರೆ. ಅದರಂತೆ ಒರಿಜಿನಲ್ ಲೈಸನ್ಸ್ ಅನ್ನು ನೀಡಿದ್ದಾರೆ. ಬಳಿಕ ಠಾಣೆಯ ಇನ್ನೋರ್ವ ಸಿಬ್ಬಂದಿ ವಿನೋದ್ ಅವರಿಗೆ 30,000 ರೂ. ಲಂಚದ ಹಣ ಕೊಟ್ಟು ಓರಿಜಿನಲ್ ಲೈನೆನ್ಸ್ ಪಡೆದುಕೊಂಡು ಹೋಗಲು ಸೂಚನೆ ನೀಡಿದ್ದಾರೆ.
ಜು.೯ರಂದು ಠಾಣೆಗೆ ಹೋಗಿ ತಸ್ಲಿಂ ಅವರನ್ನು ಭೇಟಿಯಾಗಿ ಮಾತನಾಡಿದ್ದು, ಈ ವೇಳೆ ಒರಿಜಿನಲ್ ಲೈಸೆನ್ಸ್ ಕೊಡಬೇಕಾದರೆ 10,000 ರೂ. ತಂದು ಕೊಡುವಂತೆ ತಸ್ಲಿಂ ತಿಳಿಸಿದ್ದಾರೆ. ಅದಕ್ಕೆ ತನ್ನ ಬಳಿ 500 ರೂ. ಇದೆ ಎಂದಾಗ, 10,000 ರೂ. ಇಲ್ಲದೆ ಠಾಣೆ ಕಡೆ ಬರಬೇಡ ಎಂದು ಬೈದು ಕಳುಹಿಸಿದ್ದಾರೆ. ಕಡಿಮೆ ಮಾಡಿ ಎಂದಾಗ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚ ನೀಡಲು ಇಚ್ಛಿಸದ ಕಾರಣ ಮಂಗಳೂರು ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದು, ತಸ್ಲಿಂ ಮತ್ತು ವಿನೋದ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೀಗ ಜುಲೈ 10ರಂದು 5,000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಹೆಡ್ಕಾನ್ಸ್ಟೇಬಲ್ ತಸ್ಲಿಂ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಮಂಗಳೂರು ವಿಭಾಗ ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ| ಗಾನ ಪಿ.ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್ ಅವರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.