ಪುತ್ತೂರು, ಜು. 10 (DaijiworldNews/AA): ಶಾಲಾ ಆವರಣದಲ್ಲಿನ ಟ್ಯಾಂಕ್ನಲ್ಲಿ ತುಂಬಿಸಿಟ್ಟಿದ್ದ ನೀರು ನೀಲಿ ಬಣ್ಣಕ್ಕೆ ತಿರುಗಿದ್ದು ಇದನ್ನು ಬಳಕೆ ಮಾಡಿದ ವಿದ್ಯಾರ್ಥಿಗಳಿಗೆ ತುರಿಕೆ ಉಂಟಾದ ಘಟನೆ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 9ರಂದು ಸಂಭವಿಸಿದೆ.

ಶಾಲೆಯ ಪಕ್ಕದಲ್ಲೇ ಸಿಮೆಂಟ್ನಿಂದ ನಿರ್ಮಿತವಾದ ನೀರಿನ ಟ್ಯಾಂಕ್ ಇದೆ. ಇದರೊಳಗಿನ ನೀರನ್ನು ದಿನಂಪ್ರತಿ ಮಕ್ಕಳು ಬಳಸುತ್ತಿದ್ದರು. ಶೌಚಾಲಯ, ಕೈ ಕಾಲು ತೊಳೆಯಲು ಕೂಡ ಇದೇ ನೀರನ್ನು ಹೆಚ್ಚಾಗಿ ಬಳಸುತ್ತಿದ್ದರು. ಬುಧವಾರ ಎಂದಿನಂತೆ ಕೈ ಕಾಲು ತೊಳೆಯಲು ಹೋದ ವೇಳೆಯಲ್ಲಿ ನಳ್ಳಿಯಲ್ಲಿ ನೀಲಿ ಬಣ್ಣದ ನೀರು ಬಂದಿದೆ.
ಈ ವಿಚಾರ ಶಿಕ್ಷಕರ ಗಮನಕ್ಕೆ ಬಂದಿದ್ದು, ಬಳಿಕ ಅವರು ಪಂಚಾಯತ್ ಗಮನಕ್ಕೆ ತಂದಿದ್ದಾರೆ. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ನೀರನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್ಗ ಕಳುಹಿಸಿದ್ದಾರೆ. ಟ್ಯಾಂಕ್ನ ನೀರನ್ನು ಜು.8 ರಂದು ಖಾಲಿ ಮಾಡಿ ಟ್ಯಾಂಕ್ ತೊಳೆದು ಕೊಳವೆಬಾವಿ ಮೂಲಕ ಮತ್ತೆ ನೀರು ತುಂಬಿಸಲಾಗಿತ್ತು ಎಂದು ತಿಳಿದುಬಂದಿದೆ.
ಎಸ್ಡಿಎಂಸಿ ಅಧ್ಯಕ್ಷ ಗಣೇಶ್ ಮುಂಡೋವುಮೂಲೆ, ಒಳಮೊಗ್ರು ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ಮಹೇಶ್ ರೈ ಕೇರಿ, ಆರೋಗ್ಯ ಇಲಾಖೆಯ ಸಿಎಚ್ಓ ವಿದ್ಯಾಶ್ರೀ, ಆಶಾ ಕಾರ್ಯಕರ್ತೆ ಸರೋಜಿನಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಟ್ಯಾಂಕ್ ನೀರು ನೀಲಿ ಬಣ್ಣಕ್ಕೆ ತಿರುಗಿದ್ದು, ಈ ನೀರು ಬಳಸಿದ ವಿದ್ಯಾರ್ಥಿಗಳಿಗೆ ತುರಿಕೆ ಅನುಭವ ಉಂಟಾಗಿದೆ. ಯಾರೋ ಹೊರಗಿನವರು ಟ್ಯಾಂಕ್ಗೆ ನೀಲಿ ಬಣ್ಣದ ವಸ್ತು ಹಾಕಿರಬಹುದು ಎನ್ನುವ ಅನುಮಾನ ಇದೆ. ಬುಧವಾರ ಆ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ತಿಳಿಸಿದ್ದಾರೆ.