ಕುಂದಾಪುರ, ಜು. 10 (DaijiworldNews/AA): ಕೋಟ ಪಂಚವರ್ಣ ಮಹಿಳಾ ಮಂಡಳಿ ತನ್ನ ಮಾತೃ ಸಂಸ್ಥೆಯಾದ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ನಡೆಯಲಿರುವ ನಾಲ್ಕನೇ ವರ್ಷದ "ಆಸಾಡಿ ಒಡ್ರ್" ಸಾಧಕ ಪುರಸ್ಕಾರಕ್ಕೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಣೂರು ಭಾರತಿ ವಿಷ್ಣುಮೂರ್ತಿ ಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಆಗಸ್ಟ್ 10 ರಂದು ಬೆಳಗ್ಗೆ 9 ಗಂಟೆಗೆ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಭಾಗವಾಗಿ ನಡೆಯಲಿರುವ "ಆಸಾಡಿ ಒಡ್ರ್" ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು.
ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಕುಂದಗನ್ನಡ ರವಿ ಬಸ್ರೂರು ಮತ್ತು ಕುಂದಗನ್ನಡದ ಲೇಖಕಿ ಪೂರ್ಣಿಮಾ ಕಮಲಶಿಲೆ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಗ್ರಾಮೀಣ ತಿನಿಸುಗಳು, ಪರಿಕರ ಪ್ರದರ್ಶನ, ಸ್ಪರ್ಧೆ, ಅನಾಥಾಶ್ರಮಗಳಿಗೆ ನೆರವು ಮತ್ತು ಸ್ನೇಹಕೂಟ ಮಣೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗೆಳೆಯರ ಬಳಗ ಹಂದಟ್ಟು ಮತ್ತು ಹಂದಟ್ಟು ಮಹಿಳಾ ಬಳಗ ಕೋಟ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಪಂಚವರ್ಣ ಮಹಿಳಾ ಮಂಡಳಿ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತು ಕಾರ್ಯಧ್ಯಕ್ಷೆ ಅಧ್ಯಕ್ಷೆ ಕಲಾವತಿ ಅಶೋಕ್ ಮಾಹಿತಿ ನೀಡಿದ್ದಾರೆ.