ಕಾಸರಗೋಡು, ಜು. 09 (DaijiworldNews/AK): ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಬಂದ್ ನ ವಾತಾವರಣ ಕಂಡುಬರುತ್ತಿದೆ. ಕೆ ಎಸ್ ಆರ್ ಟಿ ಸಿ ಹಾಗೂ ಖಾಸಗಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.





ನಗರದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿವೆ. ಬೆಳಿಗ್ಗೆ ಆಟೋ ರಿಕ್ಷಾ ಹಾಗೂ ಕೆಲ ಖಾಸಗಿ ವಾಹನಗಳು ರಸ್ತೆಗಿಳಿದರೂ ಪ್ರತಿಭಟನಾಕಾರರು ತಡೆದರು. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ.
ಶಾಲಾ ಕಾಲೇಜುಗಳು ತೆರೆದಿದ್ದು , ಹಾಜರಾತಿ ಕಡಿಮೆಯಾಗಿದೆ. ಸರಕಾರಿ ಕಚೇರಿಗಳಲ್ಲಿ ಬಹುತೇಕ ಮಂದಿ ನೌಕಕರು ಕೆಲಸಕ್ಕೆ ಹಾಜರಾಗಿಲ್ಲ . ಮಂಗಳವಾರವೂ ಜಿಲ್ಲೆಯಲ್ಲಿ ಖಾಸಗಿ ಬಸ್ಸು ಮುಷ್ಕರ ನಡೆದಿತ್ತು. ಬುಧವಾರ ಕಾರ್ಮಿಕರ ಮುಷ್ಕರ ನಡೆಯುತ್ತಿರುವುದರಿಂದ ಸತತ ಎರಡನೇ ದಿನವೂ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಕುಂಬಳೆ , ಉಪ್ಪಳ , ಮಂಜೇಶ್ವರ , ಬದಿಯಡ್ಕ , ಕಾಞ೦ಗಾಡ್ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಮುಷ್ಕರದ ಬಿಸಿ ತಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ತೆರೆದಿವೆ. ಖಾಸಗಿ ವಾಹನಗಳು ಸಂಚಾರ ನಡೆಸುತ್ತಿವೆ.