ಸುಳ್ಯ, ಜು. 09 (DaijiworldNews/TA): ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆಯಾಗಿದ್ದು, ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು. ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.


ಇತ್ತೀಚೆಗೆ ನಡೆದ ಕಾನ್ಫರೆನ್ಸ್ನಲ್ಲಿ ಸಿಎಂ ಉಪಸ್ಥಿತಿಯಲ್ಲಿ, ವಿವಿಧ ಅಪರಾಧಗಳ ಬಗ್ಗೆ ಮಾಹಿತಿ ಪಡೆದ ವೇಳೆ ಕ್ರೈಂ ರೇಟ್ ಕಡಿಮೆ ಯಾಗಿರುವುದು ಕಂಡುಬಂದಿದೆ. ದ.ಕ. ಜಿಲ್ಲೆಯಲ್ಲೇ ಗಮನಿಸಿದಾಗ ಕಠಿನ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರಲು ಸಾಧ್ಯವಾಗಿದೆ ಎಂದರು. ಬೆಂಗಳೂರು ಬಳಿಕ ಬೆಳೆಯಲು ಅವಕಾಶ ಗಳಿರುವ ಕರಾವಳಿಯಲ್ಲಿ ಶಾಂತಿ ಮುಖ್ಯ, ಅದಕ್ಕಾಗಿ ಈ ಭಾಗಕ್ಕೆ ಹೆಚ್ಚು ಗಮನ ಹರಿಸುತ್ತೇವೆ. ತಪ್ಪು ಮಾಡಿದವರನ್ನು ಸರಿಪಡಿಸಲು ಪೊಲೀಸ್ ಇಲಾಖೆ ಇದೆ ಎಂದು ತಿಳಿಸಿದರು.
ದ.ಕ. ಜಿಲ್ಲೆಯ ಹೆಚ್ಚುವರಿ ಪೊಲೀಸ್ ಹೊರ ಠಾಣೆ ಬೇಡಿಕೆ ಬಗ್ಗೆ, ಎಸ್ಪಿ ಅವರಿಂದ ಪ್ರಸ್ತಾವನೆ ಬಂದಲ್ಲಿ ಪರಿಶೀಲನೆ ನಡೆಸಿ. ಕ್ರಮಕೈಗೊಳ್ಳುತ್ತೇವೆ ಎಂದರು. ಪುತ್ತೂರಿಗೆ ಎಸ್ಪಿ ಕಚೇರಿ ಬೇಡಿಕೆ ಇದೆ: ಮಂಗಳೂರಿನ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದರು. ಸಚಿವರನ್ನು ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಪ್ರಮುಖರು ಸ್ವಾಗತಿಸಿದರು. ಬಳಿಕ ಸಚಿವರು ಪ್ರಮುಖರ ಜತೆ ಜಿಲ್ಲೆಯ ಬಗ್ಗೆ, ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು.