ಕಾರ್ಕಳ, ಜು. 08 (DaijiworldNews/AA): ಆ್ಯಂಟಿ ಕಮ್ಯುನಲ್ ವಿಂಗ್ ಶಾಶ್ವತ ವ್ಯವಸ್ಥೆಯಲ್ಲ, ಶಾಂತಿ ನೆಲೆಸಿದರೆ ಇಂತಹ ವಿಭಾಗಗಳ ಅಗತ್ಯವಿಲ್ಲ ಎಂದು ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯನ್ನು ಉದ್ದೇಶಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಡಾ ಜಿ ಪರಮೇಶ್ವರ್ ಅವರು ಇಂದು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, "ಆ್ಯಂಟಿ ಕಮ್ಯುನಲ್ ವಿಂಗ್ ಶಾಶ್ವತವಾಗಿ ಇರಬಾರದು. ಸಮಾಜದಲ್ಲಿ ಶಾಂತಿಯನ್ನು ಖಚಿತಪಡಿಸುವುದು ನಮ್ಮ ಉದ್ದೇಶವಾಗಿದೆ" ಎಂದು ಹೇಳಿದರು.
ಕರಾವಳಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಶಾಂತಿ ವಿಚಾರವಾಗಿ ಮಾತನಾಡಿದ ಅವರು, "ಹಿಂದೆ, ಮಲೆನಾಡು ಪ್ರದೇಶದ ಜನರು ಕರಾವಳಿ ಪ್ರದೇಶವನ್ನು ಮೆಚ್ಚುಗೆಯಿಂದ ನೋಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ, ಪರಿಸ್ಥಿತಿ ಹದಗೆಟ್ಟಿದೆ ಎಂದು ಅನಿಸುತ್ತದೆ. ಕರಾವಳಿ ಪ್ರದೇಶದಲ್ಲಿ ಶಾಂತಿ ನೆಲೆಸಿದರೆ, ಆ್ಯಂಟಿ ಕಮ್ಯುನಲ್ ವಿಂಗ್ ನ ಅಗತ್ಯವಿರುವುದಿಲ್ಲ ಮತ್ತು ಅಶಾಂತಿಯನ್ನು ಪ್ರಚೋದಿಸುವವರಿಗೆ ಮಾಡಲು ಯಾವುದೇ ಕೆಲಸ ಉಳಿಯುವುದಿಲ್ಲ" ಎಂದರು.
"ಕೋಮು ವಿಭಜನೆಯನ್ನು ಪ್ರಚೋದಿಸುವವರಿಂದಾಗಿ ಆ್ಯಂಟಿ ಕಮ್ಯುನಲ್ ವಿಂಗ್ ಅಗತ್ಯವಾಗಿದೆ. ಸಮಾಜಕ್ಕೆ ಬಲವಾದ ಸಂದೇಶವನ್ನು ಸಾರಲು ನಾವು ಶಾಂತಿ ಸಭೆಯನ್ನು ನಡೆಸುತ್ತೇವೆ" ಎಂದು ತಿಳಿಸಿದರು.
"ಇತ್ತೀಚಿನ ದಿನಗಳಲ್ಲಿ ಹಲವಾರು ಕೊಲೆಗಳು ವರದಿಯಾಗಿವೆ. ಈ ಅಪರಾಧಗಳನ್ನು ನಿಭಾಯಿಸಲು ನಾವು ಈಗಾಗಲೇ ವಿಶೇಷ ತಂಡವನ್ನು ರಚಿಸಿದ್ದೇವೆ. ಅದರ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಕೆಲವು ಅಧಿಕಾರಿಗಳನ್ನು ವರ್ಗಾಯಿಸಿದ್ದೇವೆ" ಎಂದು ವಿವರಿಸಿದರು.
"ನಾವು ಮಂಗಳೂರಿನಲ್ಲಿ ಶಾಂತಿ ಸಭೆ ನಡೆಸಲು ಯೋಜಿಸಿದ್ದೆವು. ಈಗ ಅದನ್ನು ಬುಧವಾರಕ್ಕೆ ನಿಗದಿಪಡಿಸಲಾಗಿದೆ. ಸಭೆಯು ಪಕ್ಷಾತೀತವಾಗಿ, ಜಾತಿ ಅಥವಾ ಧರ್ಮದ ಬೇಧವಿಲ್ಲದೆ ನಡೆಯಲಿದೆ. ಶಾಂತಿ ಸಭೆಯಲ್ಲಿ ಸಾರ್ವಜನಿಕ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಮತ್ತು ನಾಗರಿಕರು ಭಾಗವಹಿಸುವ ನಿರೀಕ್ಷೆಯಿದೆ. ಸಮಾಜಕ್ಕೆ ಶಾಂತಿಯ ಬಲವಾದ ಸಂದೇಶವನ್ನು ಸಾರುವುದು ನಮ್ಮ ಗುರಿಯಾಗಿದೆ" ಎಂದು ಮಾಹಿತಿ ನೀಡಿದರು.
"ನನಗೆ ಯಾವುದೇ ಅಸಮಾಧಾನವಿಲ್ಲ. ನನಗೆ ಮೂರನೇ ಬಾರಿಗೆ ಗೃಹ ಖಾತೆಯನ್ನು ವಹಿಸಲಾಗಿದೆ ಮತ್ತು ನಾನು ನನ್ನ ಕರ್ತವ್ಯಗಳನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೇನೆ. ನನಗೆ ಅಸಮಾಧಾನಗೊಳ್ಳಲು ಯಾವುದೇ ಕಾರಣವಿಲ್ಲ. ನಾನು ರಾಜಕೀಯ ವ್ಯಾಖ್ಯಾನದಲ್ಲಿ ಹೆಚ್ಚು ತೊಡಗುವುದಿಲ್ಲ, ಅಥವಾ ಪ್ರಸ್ತುತ ರಚನೆಯಲ್ಲಿ ಯಾವುದೇ ಬದಲಾವಣೆಯನ್ನು ನಾವು ಬಯಸುವುದಿಲ್ಲ" ಎಂದು ನುಡಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಇತ್ತೀಚಿನ ದೆಹಲಿಗೆ ಭೇಟಿ ನೀಡಿದ ವಿಚಾರವಾಗಿ ಮಾತನಾಡಿ, "ಅವರು ಅಧಿಕೃತ ಕಾರಣಗಳಿಗಾಗಿ ಭೇಟಿ ನೀಡುತ್ತಿದ್ದಾರೆ. ನಾನು ಈಗಷ್ಟೇ ಸಿಎಂ ಜೊತೆ ಮಾತನಾಡಿದ್ದೇನೆ. ನಾಳೆ ಬೆಳಿಗ್ಗೆ ಹೊರಡುತ್ತಿದ್ದೇನೆ ಎಂದು ಅವರು ಹೇಳಿದರು. ಇದರಲ್ಲಿ ಅಸಹಜ ಏನೂ ಇಲ್ಲ. ಅವರು ಈಗ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಪ್ರಯಾಣಿಸಲು ಸೂಕ್ತರಾಗಿದ್ದಾರೆ. ಮಾಧ್ಯಮಗಳಲ್ಲಿ ಹರಡುತ್ತಿರುವ ಊಹಾಪೋಹಗಳಲ್ಲಿ ಯಾವುದೇ ಸತ್ಯವಿಲ್ಲ" ಎಂದು ಹೇಳಿದರು.
ಅವರು ನಡೆಸಿದ ಯಾಗದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ಸಮೃದ್ಧಿಗಾಗಿ ಪ್ರಾರ್ಥಿಸುವುದರಲ್ಲಿ ತಪ್ಪೇನು? ನಾನು ಎಲ್ಲರ ಒಳಿತಿಗಾಗಿ - ನಿಮ್ಮ ಮತ್ತು ನನ್ನ ಒಳಿತಿಗಾಗಿ ಪ್ರಾರ್ಥಿಸಿದೆ. ಅದರಲ್ಲಿ ನನಗೆ ಏನೂ ತಪ್ಪಿಲ್ಲ ಎಂದು ಅನಿಸುತ್ತದೆ. 'ಸಮೃದ್ಧಿ' ಎಂದರೆ ಏನು - ನೀವೇ ಅದನ್ನು ಅರ್ಥೈಸಿಕೊಳ್ಳಬಹುದು. ನಾನು ಎಲ್ಲವನ್ನೂ ವಿವರಿಸಿದರೆ, ನೀವು ನಿರ್ಣಯಿಸಲು ಏನೂ ಉಳಿಯುವುದಿಲ್ಲವೇ?" ಎಂದು ದೃಢವಾಗಿ ಸ್ಪಷ್ಟಪಡಿಸಿದರು.